ಸಾರಾಂಶ
ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ನನಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಆಸೆ ಇದೆ ಎಂದು ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.ಕೊಡಗಿನ ಕಾಫಿ ತೋಟದ ನಡುವೆ ಕೆಲವು ದಿನಗಳು ಕಾಲಕಳೆದ ನಂತರ ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ತನ್ನ ಮೂಲ ರಾಜ್ಯವಾದ ತೆಲಂಗಾಣದಿಂದ ಕೊಡಗಿಗೆ ಪತಿ ಹಾಗೂ ಸ್ನೇಹಿತರ ಜೊತೆ ಬಂದಿದ್ದರು. ಈ ವೇಳೆ ಅಲ್ಲಿನ ಕಾಫಿ ತೋಟದ ನಡುವೆ ಕೆಲ ದಿನಗಳನ್ನು ಕಳೆದಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಸಂತೋಷ ಹಂಚಿಕೊಂಡಿರುವ ಸಿಂಧು, ಕನಸಿನಲ್ಲಿರುವಂತೆ ಕಂಗೊಳಿಸುತ್ತಿರುವ ಕಾಫಿ ತೋಟವೊಂದರಲ್ಲಿ ನಾನು ಕಾಫಿ ಸಿಪ್ ಮಾಡುತ್ತಿದ್ದೆ. ಮರಗಳಿಂದ ಸುತ್ತುವರಿದ, ಪಕ್ಷಿಗಳಿಂದ ಕೂಡಿರುವ ಈ ತೋಟ ನಿಜಕ್ಕೂ ಸುಂದರವಾಗಿದೆ. 14 ವನ್ಯಜೀವಿಗಳು, 800 ತಳಿಯ ಪಕ್ಷಿಗಳನ್ನೂ, ವಿವಿಧ ಜಾತಿಯ ಪುಷ್ಪ, ಸಸ್ಯಗಳು ಈ ತೋಟದಲ್ಲಿವೆ. ನನ್ನ ಪತಿ ದತ್ತ ಕೂಡಾ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವ ಚಿಂತನೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ, ತಾನು ಯಾವ ತೋಟಕ್ಕೆ, ಯಾವ ಊರಿಗೆ ಬಂದಿದ್ದೇನೆ ಎಂಬ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.