ಎಕ್ಸಲಂಟ್ ಶಾಲೆಯಲ್ಲಿ ಮಾತಾ-ಪಿತೃಗಳ ಪಾದ ಪೂಜೆ

| Published : Feb 15 2024, 01:35 AM IST

ಸಾರಾಂಶ

ಪೂಜೆ, ಪ್ರಾರ್ಥನೆಗಳು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಐ.ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪೂಜೆ, ಪ್ರಾರ್ಥನೆಗಳು ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಮಾತೆ ಎಂ.ಐ.ಬಿರಾದಾರ ಹೇಳಿದರು. ನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾತಾ೦-ಪಿತೃಗಳ ಪಾದ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂತಹ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗಿ ಅಧ್ಯಯನದಲ್ಲಿ ಪ್ರಾವಿಣ್ಯತೆ ಬೆಳೆಯುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಆಲೋಚನೆ, ಶುದ್ಧ ನಡುವಳಿಕೆ, ಆರೋಗ್ಯಪೂರ್ಣ ಹವ್ಯಾಸ ರೂಢಿಸಿಕೊಳ್ಳಲು ಉಪಯುಕ್ತ ಸನ್ನಿವೇಶಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು.

ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿ, ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸುವಲ್ಲಿ ಪಾಲಕರೇ ಮಾದರಿಯಾಗಬೇಕು. ತಾವು ಅನುಸರಿಸುವ ಪ್ರತಿಯೊಂದು ನಡೆಯನ್ನು ಮಗು ಅನುಕರಣೆ ಮಾಡುತ್ತದೆ. ಮಕ್ಕಳಲ್ಲಿ ಉತ್ತಮ ವಿಚಾರಗಳನ್ನು ನಿರೀಕ್ಷಿಸುವ ಮೊದಲು ತಮ್ಮ ಇರುವಿಕೆಯನ್ನು ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ತಂದೆ-ತಾಯಿಯನ್ನು ಗೌರವಿಸುವುದು, ಪ್ರೀತಿಸುವುದು ಯಾವುದೋ ಒಂದು ದಿನಕ್ಕೆ, ಸಂದರ್ಭಕ್ಕೆ ಮಾತ್ರ ಸಿಮಿತವಾಗದೇ, ಮಕ್ಕಳು ಅನುದಿನವು ಹೆತ್ತವರ ಪೂಜೆ ಮಾಡಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಪಾಲಕರಾದ ರಾಜಕುಮಾರ ಕೋಷ್ಠಿ, ರಾಜೇಂದ್ರ ಕುಲಕರ್ಣಿ, ಸಂತೋಷ ಜಾಲಿಹಾಳ, ಪ್ರಶಾಂತ ವಗ್ಗೊಲಿ, ವಿಜಯ ಚವ್ಹಾಣ ಸೇರಿದಂತೆ ಶಾಲೆ ಸಿಬ್ಬಂದಿ ಉಪಸ್ಥಿತರಿದ್ದರು.