ಸಾರಾಂಶ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ತಾಲೂಕಿನ ಚಿಲುಗೋಡು ಗ್ರಾಮದ ರೈತರು ಹಾಗೂ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಾನಮಟ್ಟಿ ಬೆಂಚಿಕಟ್ಟಿ ಕುಂಟಾವರಣ ಕಟ್ಟೆ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಚಿಲುಗೋಡು ಗ್ರಾಮದಿಂದ ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರಕ್ಕೆ 14 ಕಿಮೀ ಪಾದಯಾತ್ರೆ ಮಾಡಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ಕುರಿತು ರಾಜ್ಯರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಮಾನಮಟ್ಟಿ, ಬೆಂಚಿಕಟ್ಟಿ, ಕುಂಟಾವರಣ ಕಟ್ಟೆ ಏತ ನೀರಾವರಿ ಯೋಜನೆ ಜಾರಿಗೆ ಸರಕಾರ ಕೂಡಲೇ ಅನುದಾನ ನೀಡಬೇಕು. ಶೀಘ್ರದಲ್ಲಿ ಎಸ್ಟಿಮೇಟ್ ಮಾಡಿ ಅಂದಾಜು ಪಟ್ಟಿ ತಯಾರಿಸಬೇಕು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು.
ಚಿಲುಗೋಡು ಗ್ರಾಮದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಹಿಂದೇಟು ಹಾಕಿದರೆ ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಸರಕಾರ ಕೂಡಲೇ ಚಿಲುಗೋಡು ಗ್ರಾಮದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಿದರೆ ಸುತ್ತಮುತ್ತಲಿನ ತಂಬ್ರಹಳ್ಳಿ, ನಂದಿಪುರ, ಯಡ್ರಾಮ್ಮನಹಳ್ಳಿ, ಕೃಷ್ಣಪುರ, ಬಸರಕೋಡು ತಾಂಡಾ ಸೇರಿ ಒಟ್ಟು 5ಸಾವಿರ ಎಕರೆಗೂ ಅಧಿಕ ಪ್ರದೇಶ ನೀರಾವರಿಯಾಗಿ ರೈತರ ಬದುಕು ಹಸನಾಗುತ್ತದೆ. ಚಿಲುಗೋಡು ಯೋಜನಾ ನಿರಾಶ್ರಿತ ಗ್ರಾಮವಾಗಿದೆ. ಭೂಮಿ, ಮನೆಯನ್ನು ಕಳೆದುಕೊಂಡ ರೈತರಿಗೆ ಇದುವರೆಗೂ ಸರಕಾರಗಳು ಯಾವುದೇ ಪೂರಕ ಸೌಲಭ್ಯಗಳನ್ನು ದೊರಕಿಸಿ ಕೊಟ್ಟಿಲ್ಲ. ನ್ಯಾಯಯುತ ಹಕ್ಕುದಾರರಾದ ನಮಗೆ ತುಂಗಭದ್ರೆಯ ನೀರನ್ನು ಒದಗಿಸಬೇಕು ಎಂದು ತಿಳಿಸಿದರು.
ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಬಿ. ಗೋಣಿಬಸಪ್ಪ ಮಾತನಾಡಿ, ಶಾಸಕರು ಕೂಡಲೇ ಚಿಲುಗೋಡು ಗ್ರಾಮದ ಏತ ನೀರಾವರಿ ಯೋಜನೆಯ ಬ್ಲೂಪ್ರಿಂಟ್ ತಯಾರಿಸಿ ಸರಕಾರದ ಅನುದಾನಕ್ಕೆ ಒತ್ತಾಯಿಸಬೇಕು. ಸರಕಾರ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ತೋರಿದರೆ ಬಾರಕೋಲು ಚಳವಳಿ ಮೂಲಕ ಸರಕಾರವನ್ನು ಎಚ್ಚರಿಸಲಾಗುವುದು ಎಂದು ತಿಳಿಸಿದರು.ಚಿಲುಗೋಡು ಏತ ನೀರಾವರಿ ಹೋರಾಟದ ಪಾದಯಾತ್ರಿಗಳು ಪಟ್ಟಣಕ್ಕೆ ಆಗಮಿಸುತ್ತಿದಂತೆ ಸ್ಥಳಕ್ಕೆ ಶಾಸಕ ನೇಮರಾಜನಾಯ್ಕ ಭೇಟಿ ನೀಡಿ ಮಾತನಾಡಿ, ಚಿಲುಗೋಡು ಗ್ರಾಮದ ರೈತರ ಏತ ನೀರಾವರಿ ಯೋಜನೆ ಜಾರಿ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ನಾಲ್ಕು ವರ್ಷದ ಅವಧಿಯಲ್ಲಿ ಏತ ನೀರಾವರಿ ಜಾರಿಗೆ ಪ್ರಯತ್ನಿಸುತ್ತೇನೆ. ಹಿಂದೆ ಚಿಲುಗೋಡು ಭಾಗದ ಕುದುರೆ ಕಾಲುವೆ ಯೋಜನೆಗೆ ಅನುದಾನ ನೀಡಿ ಕಾಲುವೆ ಹೂಳು ಎತ್ತುವ ಕೆಲಸವನ್ನು ಮಾಡಿದ್ದೇನೆ. ನಾನು ರೈತರ ಕುಟುಂಬದಿಂದ ಬಂದಿರುವವನು, ರೈತರ ಕಷ್ಟಕ್ಕೆ ಸ್ಪಂದಿಸುತ್ತೇನೆ. ಸರಕಾರ ಅನುದಾನ ನೀಡದಿದ್ದರೆ ನಿಮ್ಮೊಂದಿಗೆ ಹೋರಾಟಕ್ಕೂ ಬರುತ್ತೇನೆ ಎಂದು ತಿಳಿಸಿದರು.
ಶಾಸಕರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಬಂದಿದ್ದ ರೈತ ಮಹಿಳೆ ಕರಿಯಮ್ಮ ತಲೆಸುತ್ತು ಬಂದು ಬಿದ್ದಳು, ಕೂಡಲೇ ಹೋರಾಟಗಾರರು ಕರಿಯಮ್ಮಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಹೋರಾಟ ಸಮಿತಿ ಅಧ್ಯಕ್ಷ ಯು. ಕಾಡಪ್ಪ, ಸಮಿತಿಯ ಕಾರ್ಯದರ್ಶಿ ಮಂಜುನಾಥ, ತಾಪಂ ಮಾಜಿ ಸದಸ್ಯ ಕ್ಯಾದ್ಗಿಹಳ್ಳಿ ಹುಲುಗಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ, ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಗೌರವಾಧ್ಯಕ್ಷ ಹಲಿಗೇರಿ ಮಹೇಶ, ತಾಲೂಕು ಕಾರ್ಯದರ್ಶಿ ತಂಬ್ರಹಳ್ಳಿ ರವಿಕುಮಾರ, ಜಿಲ್ಲಾ ಕಾರ್ಯದರ್ಶಿ ಮಾಬುಸಾಬ್, ಖಜಾಂಚಿ ಆಂಜನೇಯ, ಗ್ರಾಕೂಸ್ ಸಂಚಾಲಕಿ ಅಕ್ಕಮಹಾದೇವಿ, ಮಹಿಳಾ ಒಕ್ಕೂಟದ ನೀಲಮ್ಮ, ರೈತ ಮುಖಂಡರಾದ ಬಾಣದ ಶಿವಪ್ಪ, ಟಿ.ಜಿ. ದೊಡ್ಡಬಸಪ್ಪ, ಉಗ್ಗಣ್ಣನವರ ಮದುಸೂಧನ, ಚೌಟ್ಗಿ ಕರಿಯಪ್ಪ, ಮೈಲಪ್ಪ, ಸಾಹಿತಿ ಹುರುಕಡ್ಲಿ ಶಿವಕುಮಾರ, ತಳವಾರ ಲಕ್ಷ್ಮಣ, ಚಿಗರಿ ಹನುಮಂತ, ಜಿ. ವಸಂತಕುಮಾರ, ಗಡ್ಡಿ ನಿಂಗಪ್ಪ, ಬಸವನಗೌಡ, ಬಸರಕೋಡು ಒಪ್ಪತ್ತೇಶ ಬಣಕಾರ, ಗ್ರಾಪಂ ಸದಸ್ಯರಾದ ಕೋರಿ ಶಿವಾನಂದ, ಹೆಚ್.ಎಂ. ಮಹೇಶ್ವರಯ್ಯ ಇತರರಿದ್ದರು.