ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪದ್ಮಭೂಷಣ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಪರಿಶ್ರಮದ ಫಲವಾಗಿ ಇಂದು ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
ಕೆ.ಆರ್.ಪೇಟೆ:
ಏಪ್ರಿಲ್ ತಿಂಗಳಿನಲ್ಲಿ ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ತಾಲೂಕಿನಲ್ಲಿ ಪಾದಯಾತ್ರೆ ಮಾಡಲು ಅಪೇಕ್ಷಿಸಿರುವ ಹಿನ್ನೆಲೆಯಲ್ಲಿ ಅವರನ್ನು ಧಾರ್ಮಿಕ ವಾತಾವರಣದಲ್ಲಿ ಜಾತಿರಹಿತ, ಪಕ್ಷ ರಹಿತವಾಗಿ ಸ್ವಾಗತಿಸಿ ಜನರ ಬಳಿಗೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆದಿಚುಂಚನಗಿರಿಯ ಸತ್ಕೀರ್ತಿನಾಥ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪದ್ಮಭೂಷಣ ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳ ಪರಿಶ್ರಮದ ಫಲವಾಗಿ ಇಂದು ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದೆ. ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ ಎಂದರು.ಬಹಳ ವರ್ಷಗಳ ಹಿಂದೆ ನಾವಿನ್ನೂ ಚಿಕ್ಕವರಾಗಿದ್ದಾಗ ಭೈರವೈಕ್ಯ ಸ್ವಾಮೀಜಿಗಳು ತಾಲೂಕಿಗೆ ಆಗಮಿಸಿ ಭಕ್ತರನ್ನು ಭೇಟಿ ಮಾಡಿದ್ದರು. ಆ ಕಾರ್ಯಕ್ರಮವು ಅಭೂತಪೂರ್ವವಾಗಿ ಯಶಸ್ವಿಯಾಗಿತ್ತು. ನನ್ನ ಅದೃಷ್ಟ ನಾನು ಶಾಸಕನಾಗಿರುವಾಗ ಚುಂಚಶ್ರೀಗಳ ಸೇವೆ ಮಾಡುವ ಅವಕಾಶವಿದೆ. ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರ ಜೊತೆಯಲ್ಲಿ ಇದ್ದು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದರು.
ಮಾಜಿ ಸಚಿವ ಡಾ.ನಾರಾಯಣಗೌಡ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮಗಳಿಗೆ ಪಾದಯಾತ್ರೆ ಮೂಲಕ ಭಕ್ತರ ಭಕ್ತರ ಮನೆಗಳಿಗೆ ಭೇಟಿ ನೀಡುತ್ತಿರುವ ಶ್ರೀಗಳ ಆಲೋಚನೆಯೂ ಸ್ವಾಗತಾರ್ಹವಾಗಿದೆ ಎಂದರು.ಸಂಕಷ್ಟ ಪರಿಸ್ಥಿತಿಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿದ್ದ ಭೈರವೈಕ್ಯ ಶ್ರೀಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು ಪ್ರತಿ ಹಳ್ಳಿ ಹಳ್ಳಿಗೆ ತಿರುಗಿ ನಿಧಿ ಸಂಗ್ರಹಿಸಿ ಬರಡಾಗಿದ್ದ ಆದಿಚುಂಚನಗಿರಿ ಮಠವನ್ನು ಸುವರ್ಣ ಗಿರಿಯನ್ನಾಗಿ ಬದಲಾಯಿಸುವ ಜೊತೆಗೆ ಶ್ರೀಮಠದ ಪ್ರಖ್ಯಾತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದು ದಾಖಲೆ ನಿರ್ಮಾಣ ಮಾಡಿದ್ದರು ಎಂದರು.
ಈಗ ಪರಿಸ್ಥಿತಿ ಬದಲಾಗಿದೆ. ಮಠದ ಆಸ್ತಿಯನ್ನು ಜೋಪಾನವಾಗಿ ಕಾಪಾಡುವ ಜೊತೆಗೆ ಆದಿಚುಮಚನಗಿರಿ ಮಠದ ಕೀರ್ತಿಯನ್ನು ವಿಶ್ವದಗಲಕ್ಕೆ ಪರಿಚಯಿಸುತ್ತಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಪ್ರಧಾನ ಮಂತ್ರಿ ಶ್ರೀಮಠಕ್ಕೆ ಆಗಮಿಸುತ್ತಿದ್ದಾರೆ. ಇಂತಹ ಮಠವನ್ನು ನಾವೆಲ್ಲರೂ ಸೇರಿ ಉಳಿಸಿ ಬೆಳೆಸೋಣ ಎಂದು ಮನವಿ ಮಾಡಿದರು.ಸಭೆಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ, ಹಿರಿಯ ಬಿಜಿಎಸ್ ಶಿಕ್ಷಣ ಸಂಸ್ಥೆ ಟ್ರಸ್ಟಿಗಳಾದ ಬಿ.ಎಲ್.ದೇವರಾಜು, ಬಿ.ನಂಜಪ್ಪ, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶೀಳನೆರೆ ಅಂಬರೀಶ್, ಮನ್ಮುಲ್ ನಿರ್ದೇಶಕ ಡಾಲುರವಿ, ಕಾಂಗ್ರೆಸ್ ನಾಯಕರಾದ ಎಂ.ಡಿ.ಕೃಷ್ಣಮೂರ್ತಿ, ವಿಜಯ ರಾಮೇಗೌಡ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸುಚೇಂದ್ರಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಾಧರ, ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ ಅಧ್ಯಕ್ಷೆ ಪ್ರೇಮಕುಮಾರಿ, ಪ್ರಮೀಳಾ ವರದರಾಜೇಗೌಡ ಸೇರಿದಂತೆ ನೂರಾರು ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು.ಫೆ.23ಕ್ಕೆ ಚುಂಚನಗಿರಿಗೆ ಪ್ರಧಾನಿ ನರೇಂದ್ರಮೋದಿ
ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಫೆ.23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ. ಶ್ರೀಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥಸ್ವಾಮೀಜಿ ಅವರ ಮಹಾಗದ್ದುಗೆಯನ್ನು ಉದ್ಘಾಟಿಸಲಿರುವ ನರೇಂದ್ರ ಮೋದಿ ಅವರು, ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀಕ್ಷೇತ್ರ ಹಾಗೂ ಧಾರ್ಮಿಕ ವಿಚಾರ ಕುರಿತು ಮಾತನಾಡುವರು. ಪ್ರಧಾನಿ ಮೋದಿ ಅವರ ಭಾಷಣ ಮತ್ತು ಪ್ರವಾಸದ ಬಗ್ಗೆ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಕೆಲ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವರು ಎಂದು ತಿಳಿದುಬಂದಿದೆ.