ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಮಾನ ಮನಸ್ಕರು, ಸಜ್ಜನರು ಸೇರಿ ಆರಂಭಿಸಿದ ಧರ್ಮಸ್ಥಳ ಲಕ್ಷದೀಪೋತ್ಸವ ಪಾದಯಾತ್ರೆಯ ಪರಂಪರೆ ಇಂದು ಸಂಸ್ಕೃತಿಯಾಗಿ ಬೆಳೆದಿದೆ. ಊರಿನ ಸೌಹಾರ್ದತೆ, ಸತ್ಯ, ಧರ್ಮ, ಪ್ರೀತಿ, ಗೌರವ ಎತ್ತಿ ಹಿಡಿಯಲು ಪಾದಯಾತ್ರೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಹೇಳಿದರು.ಭಾನುವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪ್ರಯುಕ್ತ 12ನೇ ವರ್ಷದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಪ್ರತಿ ವರ್ಷವೂ 10,000ಕ್ಕಿಂತ ಅಧಿಕ ಭಕ್ತರು ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಿಂದ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಗೆ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ಬೆಳ್ತಂಗಡಿ ತಾಲೂಕಿನ ಹಾಗೂ ಆಸುಪಾಸಿನ ಭಕ್ತರು ಹಾಗೂ ಊರವರಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಎಲ್ಲರ ಸಹಭಾಗಿತ್ವ, ಮುಂದಾಳತ್ವದಲ್ಲಿ ಯಾವುದೇ ಕೊರತೆ ಇಲ್ಲದಂತೆ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಪಾದಯಾತ್ರೆಯಿಂದ ತೃಪ್ತಿ, ಶಕ್ತಿ, ಸ್ಫೂರ್ತಿ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾತನಾಡಿ, ಕೀರ್ತಿ ಶೇಷರಾದ ವಿಜಯ ರಾಘವ ಪಡುವೆಟ್ನಾಯ ಹಾಗೂ ಯಶೋವರ್ಮ ಇವರಿಬ್ಬರು ಹಾಕಿಕೊಟ್ಟ ಪಾದಯಾತ್ರೆಯ ಮೇಲ್ಪಂಕ್ತಿ ಬೆರಳೆಣಿಕೆ ಸಂಖ್ಯೆಯ ಅಭಿಮಾನಿಗಳಿಂದ ಆರಂಭವಾಗಿದ್ದು, ಇಂದು ನಾಡಿನಲ್ಲಿ ದೊಡ್ಡಮಟ್ಟದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಯನ್ನು ಹುಟ್ಟು ಹಾಕಿದೆ. ನಶಿಸಿ ಹೋಗುತ್ತಿದ್ದ ಸಾತ್ವಿಕ ಶಕ್ತಿಗಳನ್ನು ಎತ್ತಿ ಹಿಡಿದಿದೆ ಎಂದರು.
ಪಾದಯಾತ್ರೆಯ ಮಾರ್ಗದರ್ಶಕ ಪೂರನ್ ವರ್ಮ ಮಾತನಾಡಿ, ಭಕ್ತಿ,ಶ್ರದ್ಧೆ, ಗೌರವ, ಪ್ರೀತಿಯ ಹೆಜ್ಜೆಯೊಂದಿಗೆ ಆರಂಭವಾದ ಪಾದಯಾತ್ರೆ ಯಶಸ್ವಿಯಾಗಿ ನಡೆದಿದೆ. ಪಾದಯಾತ್ರೆಯಿಂದ ಶ್ರೀ ಕ್ಷೇತ್ರಕ್ಕೆ ಭಕ್ತರು ಇನ್ನಷ್ಟು ಹತ್ತಿರವಾಗಿದ್ದಾರೆ. ಈ ಬಾರಿಯ ಪಾದಯಾತ್ರೆಗೆ ಪುರುಷರು ಬಿಳಿಯ ಸಮ ವಸ್ತ್ರ ಧರಿಸಿ ಬಂದರೆ ಉತ್ತಮ ಎಂದು ಹೇಳಿದರು.ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮಾತನಾಡಿದರು.ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ, ತಾಲೂಕು ಒಕ್ಕೂಟ ಅಧ್ಯಕ್ಷ ಸೀತಾರಾಮ್ ಆರ್., ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಿನ್ಸಿಪಾಲ್ ಡಾ. ಬಿ.ಎ. ಕುಮಾರ್ ಹೆಗ್ಡೆ ಮತ್ತಿತರರಿದ್ದರು.ಯೋಜನೆಯ ಕೃಷಿ ನಿರ್ದೇಶಕ ರಾಮ್ ಕುಮಾರ್ ನಿರೂಪಿಸಿದರು. ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ವಂದಿಸಿದರು. ಕಳೆದ ವರ್ಷದ ಪಾದಯಾತ್ರೆಯ ಆಯ-ವ್ಯಯ ಮಂಡಿಸಲಾಯಿತು. ಈ ಬಾರಿಯ ಪಾದಯಾತ್ರೆಯ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು................26ರಂದು 12ನೇ ವರ್ಷದ ಪಾದಯಾತ್ರೆಈ ಬಾರಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪಾದಯಾತ್ರೆ ನ.26ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಇದರಲ್ಲಿ ಗಣ್ಯರ ಸಹಿತ ಅನೇಕ ಭಜನಾ ತಂಡಗಳು, ಭಕ್ತ ಬಾಂಧವರು ಭಕ್ತಿ, ಭಜನೆಯೊಂದಿಗೆ ಪಾದಯಾತ್ರೆಯಲ್ಲಿ ಸಾಗಿಬರಲಿದ್ದಾರೆ. ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಭಕ್ತರು ತಮ್ಮ ಬೇಡಿಕೆಯನ್ನು ಪ್ರಾರ್ಥನೆಯಾಗಿ ಸಲ್ಲಿಸಿ, ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.