ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೃಷಿ ಉತ್ಪನ್ನಗಳ ವಿಕ್ರಯಕ್ಕೆ ತೆರಳುವ ರೈತರು ಮತ್ತು ಸಾರ್ವಜನಿಕರು ರಸ್ತೆ ದುರಸ್ಥಿಗೆ ಆಗ್ರಹಿಸುತ್ತಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ

ಹಗರಿಬೊಮ್ಮನಹಳ್ಳಿ: ಪಟ್ಟಣದಿಂದ ತಂಬ್ರಹಳ್ಳಿವರೆಗಿನ ರಸ್ತೆಯಲ್ಲಿನ ತಗ್ಗು ಗುಂಡಿ ಮುಚ್ಚಿಸುವ ಜತೆಗೆ ರಸ್ತೆ ರಿಪೇರಿ ಮಾಡುವಂತೆ ಆಗ್ರಹಿಸಿ ತಾಲೂಕಿನ ಯಡ್ರಾಮನಹಳ್ಳಿ ಗ್ರಾಮದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ರೈತರು ಗುರುವಾರ ಪಟ್ಟಣಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿ ಮನವಿ ಸಲ್ಲಿಸಿದರು.

ಗ್ರಾಮದಿಂದ ಮೌನ ಪಾದಯಾತ್ರೆಯ ಮೂಲಕ ಪಟ್ಟಣಕ್ಕಾಗಮಿಸಿದ ನೂರಾರು ಪ್ರತಿಭಟನಾಕಾರರು ಇಲ್ಲಿನ ಬಸವೇಶ್ವರ ವೃತ್ತದ ಬಳಿ ಪ್ರತಿಭಟನಾ ಸಮಾವೇಶ ನಡೆಸಿ ರಸ್ತೆ ದುರವಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಕೊಟ್ರೇಶ್, ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಕೃಷಿ ಉತ್ಪನ್ನಗಳ ವಿಕ್ರಯಕ್ಕೆ ತೆರಳುವ ರೈತರು ಮತ್ತು ಸಾರ್ವಜನಿಕರು ರಸ್ತೆ ದುರಸ್ಥಿಗೆ ಆಗ್ರಹಿಸುತ್ತಿದ್ದರೂ ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ ಎಂದು ದೂರಿದರು.

ದಲಿತ ಮುಖಂಡ ಯಡ್ರಾಮನಹಳ್ಳಿ ಮರಿಯಪ್ಪ ಮಾತನಾಡಿ, ಇತ್ತೀಚಿಗೆ ಇದೇ ರಸ್ತೆಯಲ್ಲಿ ಸಾರಿಗೆ ಬಸ್ ಆಕ್ಸೆಲ್ ಬ್ಲೇಡ್ ತುಂಡಾಗಿ ರಸ್ತೆ ಪಕ್ಕದ ಕಮರಿಗೆ ಉರುಳಿದೆ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಪವಾಡ ಸದೃಶ್ಯವಾಗಿ ಬದುಕಿದ್ದಾರೆ, ರಸ್ತೆ ಸಮತಟ್ಟಾಗಿದ್ದರೆ ಇಂತಹ ಅಪಘಾತ ಸಂಭವಿಸುವುದಿಲ್ಲ. ನಿರಂತರವಾಗಿ ನಡೆಯುತ್ತಿರುವ ಅಪಘಾತಗಳ ಹೊಣೆ ಯಾರದ್ದು ಎಂದು ಪ್ರಶ್ನಿಸಿದರು.

ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ಥಿಗೊಳಿಸಿ ಪ್ರಯಾಣಿಕರ ಜೀವಕ್ಕೆ ರಕ್ಷಣೆ ನೀಡಬೇಕು ಎಂದು ಕೆ. ಅರುಣಕುಮಾರ್ ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರು ತಂಬ್ರಹಳ್ಳಿಯಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ಥಿಗೊಳಿಸವಂತೆ ಒತ್ತಾಯಿಸುವ ಮನವಿಯನ್ನು ಉಪ ತಹಸೀಲ್ದಾರ್ ಶಿವಕುಮಾರ್ ಗೌಡಗೆ ಸಲ್ಲಿಸಿದರು.

ಎಚ್.ತಿಪ್ಪಣ್ಣ, ಎಸ್.ಚಿನ್ನಪ್ಪ, ಎಂ. ಬಸವರಾಜ್, ಸಿ.ನಾಗೇಂದ್ರ, ಕೆ.ಗಣೇಶ್, ಜಿ.ವೀರೇಶ್, ಜಿ.ಶ್ರೀನಿವಾಸರಾಜು, ಕುರಿ ಮುದುಕಪ್ಪ, ಎ.ಈರಪ್ಪ, ಮಂಜುನಾಥ್ ಹಾಗೂ ಗುಡುದಪ್ಪ ಸೇರಿದಂತೆ ಮತ್ತಿತರರಿದ್ದರು.