ಸಾರಾಂಶ
ಕೂಡ್ಲಿಗಿ: ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಅವರ ಒಪ್ಪಿಗೆ ಪಡೆದ ನಂತರ ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಸಮಾಧಾನಿತರನ್ನು ಒಂದುಗೂಡಿಸಲು ಯಾತ್ರೆ ಮಾಡುವ ಇಚ್ಛೆ ಹೊಂದಿದ್ದೇನೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಸಂಕಲ್ಪವನ್ನು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಮೂಲಕ ಮಾಡಿದ್ದು, ನನಗೆ ರಾಜ್ಯಾಧ್ಯಕ್ಷನಾಗುವ ಅವಕಾಶ ಕೊಟ್ಟರೆ ಎಲ್ಲರನ್ನೂ ಒಗ್ಗೂಡಿಸುವೆ. ಅಲ್ಲದೆ, 2028ರಲ್ಲಿ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ. ಕಳೆದ ಚುನಾವಣೆಗಳಲ್ಲಿ ಸೋತವರೂ ಶಕ್ತಿವಂತರಿದ್ದಾರೆ. ಪ್ರಾಮಾಣಿಕವಾಗಿ ದುಡಿದವರೂ ಪಕ್ಷದಿಂದ ದೂರವಿದ್ದಾರೆ. ಹೀಗಾಗಿ, ಈಗಾಗಲೇ ಸಾಕಷ್ಟು ನಾಯಕರು, ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲ ನಾಯಕರು ವೈಮನಸ್ಸು ಮರೆತು ಒಂದಾಗುವ ಅವಶ್ಯವಿದೆ ಎಂದರು.ನಾನು ಬಿ.ವೈ. ವಿಜಯೇಂದ್ರ ಸೇರಿ ಯಾರ ವಿರುದ್ಧವಾಗಿ ಅಧ್ಯಕ್ಷ ಸ್ಥಾನ ನೀಡುವಂತೆ ಕೇಳುತ್ತಿಲ್ಲ. ಪಕ್ಷವು ಅವಕಾಶ ಮಾಡಿಕೊಟ್ಟರೆ ಮಾತ್ರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಶಾಸಕ ಬಸವನಗೌಡ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಯಾವುದೇ ಬಣದಲ್ಲಿ ನಾನು ಗುರುತಿಸಿಕೊಂಡಿಲ್ಲ. ಯತ್ನಾಳ್ ಸಹ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ. ದಿಲ್ಲಿಯ ವರಿಷ್ಠರ ಅಂಗಳದಲ್ಲಿ ಚೆಂಡು ಇದೆಯಾದರೂ, ನಾನು ಮಾತ್ರ ಪಕ್ಷ ಅವಕಾಶ ಕೊಟ್ಟರೆ ರಾಜ್ಯಾಧ್ಯಕ್ಷನಾಗುವೆ. ಇಲ್ಲ ಅಂದರೂ ಪಕ್ಷದ ಪರವಾಗಿ ಕೆಲಸ ಮಾಡುವೆ. ಹೀಗಾಗಿ, ಎಲ್ಲರೂ ಪಕ್ಷದ ಹಿತದೃಷ್ಟಿಯಿಂದ ಒಂದಾಗಿ ಮುಂಬರುವ 2028ರಲ್ಲಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಜವಾಬ್ದಾರಿ ಹೊರಬೇಕಿದೆ ಎಂದು ಹೇಳಿದರು.
ಬಿಜೆಪಿ ಸಂಘಟನೆಗಾಗಿ ಕೂಡ್ಲಿಗಿ ಸೇರಿದಂತೆ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚು ಒತ್ತು ನೀಡಿದ್ದು, ನನಗೆ ಗದಗ, ಚಾಮರಾಜ ನಗರ, ಚಿತ್ರದುರ್ಗ ಸೇರಿ ನಾನಾ ಕಡೆ ಸ್ಪರ್ಧಿಸುವಂತೆ ಆಹ್ವಾನಿಸುತ್ತಿದ್ದಾರೆ. ಆದರೆ, ಕೂಡ್ಲಿಗಿಯಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ದೃಷ್ಟಿಯಿದೆ ಎಂದು ತಿಳಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಬಣವಿಕಲ್ಲು ಕೆ. ನಾಗರಾಜ, ಮುಖಂಡರಾದ ಬಿ. ಭೀಮೇಶ್, ಸಾಣಿಹಳ್ಳಿ ಹನುಮಂತು, ತಾಲೂಕು ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ನಾಯಕ, ಎಲ್. ಪವಿತ್ರಾ, ಅಮಲಾಪುರ ಸುದರ್ಶನ, ಗುರಿಕಾರ ರಾಘವೇಂದ್ರ, ರಜನಿಕಾಂತ್, ಚೋರನೂರು ಎರಿಸ್ವಾಮಿ, ಕೆ. ದಿಬ್ಬದಹಳ್ಳಿ ಪ್ರಾಣೇಶ್‌ರಾವ್, ಜಿ. ಪಾಪಯ್ಯ, ಗುಡೇಕೋಟೆ ಬಸವರಾಜ, ಗುನ್ನಳ್ಳಿ ನಾರಾಯಣ, ಶಿವಮೂರ್ತಿ, ಬೆಳಗಟ್ಟೆ ದಿನೇಶ್ ಸೇರಿ ಇತರರಿದ್ದರು.