ಸರ್ಕಾರಿ ನೌಕರರೆಂದು ಪರಿಗಣಿಸಲು ಮನವಿ

| Published : Nov 01 2023, 01:00 AM IST / Updated: Nov 01 2023, 01:01 AM IST

ಸಾರಾಂಶ

ಬೆಂಗಳೂರು ಚಲೋ ಕೈಗೊಂಡ ಅಂಧರ ತಂಡ । 9 ಬೇಡಿಕೆಗೆ ಆಗ್ರಹಿಸಿ ವಿಜಯನಗರದಿಂದ ಪಾದಯಾತ್ರೆ
ಕನ್ನಡಪ್ರಭ ವಾರ್ತೆ, ತುಮಕೂರು ವಿ.ಆರ್.ಡಬ್ಲೂ , ಎಂ.ಆರ್.ಡಬ್ಲೂ ಅವರನ್ನುಸರಕಾರಿ ನೌಕರರೆಂದು ಪರಿಗಣಿಸಬೇಕು, ಎಸ್ಸೆಸ್ಸೆಲ್ಸಿ ಮತ್ತು ಆ ನಂತರ ಶಿಕ್ಷಣ ಮೊಟಕುಗೊಳಿಸಿರುವ ಅಂಗವಿಕಲರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಖಾಸಗಿ, ಅಥವಾ ಸರ್ಕಾರಿ ಉದ್ಯೋಗ ನೀಡಲು ಸರ್ಕಾರ ಮುಂದಾಗಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಳ್ಳಾರಿ ವಿಜಯನಗರದಿಂದ ಬೆಂಗಳೂರು ಚಲೋ ಹಮ್ಮಿಕೊಂಡಿರುವ ಅಂಧರ ತಂಡವನ್ನು ಸ್ವಾಗತಿಸಿ, ಬೀಳ್ಕೊಡಲಾಯಿತು. ಹೋರಾಟ ಸಮಿತಿ ಕರ್ನಾಟಕದ ಅಧ್ಯಕ್ಷ ಎಂ.ಷರೀಫ್ ಅವರ ಅಧ್ಯಕ್ಷತೆಯಲ್ಲಿ ಅಂಧರಾದ ಸಂತೋಷ್, ಧರಣೇಶ್ವರಿ, ಪಿ.ಸಿ.ಶಾಂತ, ನೇತ್ರಾವತಿ ಅವರು 2023ರ ಅಕ್ಟೋಬರ್ 16ರಂದು ವಿಜಯನಗರದಿಂದ 9 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದು, ಪಾದಯಾತ್ರೆ ತುಮಕೂರು ನಗರಕ್ಕೆ ಆಗಮಿಸಿದ ವೇಳೆ ಮಾದಿಗ ದಂಡೋರದ ಪಾವಗಡ ಶ್ರೀರಾಮ್, ಕನ್ನಡ ಸೇನೆಯ ಧನಿಯಕುಮಾರ್, ಸವಿತಾ ಸಮಾಜದ ಮಂಜೇಶ್, ದಸಂಸ ಮುಖಂಡ ಬಂಡೆಕುಮಾರ್, ಸಾಗರ್, ಮಾದಿಗ ದಂಡೋರದ ಆಟೋ ಶಿವರಾಜು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸ್ವಾಗತಿಸಿ, ಟೌನ್‌ಹಾಲ್ ಮುಂಭಾಗ ಪದ್ಮಶ್ರೀ ಡಾ. ಸೂಲಗಿತ್ತಿ ನರಸಮ್ಮ ಅವರು ಪಾರ್ಕಿನಲ್ಲಿ ಕೆಲ ಕಾಲ ವಿಶ್ರಾಂತಿಗೆ ಅವಕಾಶ ಕಲ್ಪಿಸಿದ ನಂತರ ಬೀಳ್ಕೊಡಲಾಯಿತು. ಮಾದಿಗ ದಂಡೋರದ ಪಾವಗಡ ಶ್ರೀರಾಮ್, ಪಂಚೇಂದ್ರಿಯಗಳು ಸರಿ ಇರುವ ಜನರೇ ಇಂದು ಸರಕಾರ ಗಮನ ಸೆಳೆಯಲು ಹೋರಾಟ ನಡೆಸುವುದು ಕಷ್ಟ. ಸಾಮಾಜಕ್ಕಾಗಿ ತಮನ್ನು ತಾವು ತೊಡಗಿಸಿಕೊಂಡಿರುವ ಸಮಾನ ಮನಸ್ಕರು ಸೇರಿ ಅಂಗವಿಕಲರ ಸಮಸ್ಯೆ, ಪೌರಕಾರ್ಮಿಕರು, ಕೆ.ಎಸ್.ಆರ್.ಟಿ. ನೌಕರರು, ಗೃಹರಕ್ಷಕ ಸಿಬ್ಬಂದಿ, ಗ್ರಾಮ ಸಹಾಯಕರ ಸಮಸ್ಯೆ ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಸರ್ಕಾರ, ಜನಸಾಮಾನ್ಯರು ಇಂತಹವರ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು. ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ಆಂಧ ಸಹೋದರ, ಸಹೋದರಿಯರು ವಿಜಯನಗರದಿಂದ ನೂರಾರು ಕಿ.ಮಿ. ಪಾದಯಾತ್ರೆ ಹಮ್ಮಿಕೊಂಡು ಸರ್ಕಾರದ ಗಮನಸೆಳೆಯಲು ಹೊರಟಿರುವುದು ಸ್ವಾಗತಾರ್ಹ. ಸರ್ಕಾರ ಕೂಡಲೇ ಇವರನ್ನು ಬೇಟಿಯಾಗಿ, ಮನವಿಯನ್ನು ಆಲಿಸಿ, ಪರಿಹಾರಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು. ಸಮಿತಿಯ ಅಧ್ಯಕ್ಷ ಎಂ.ಷರೀಫ್ ಮಾತನಾಡಿ, ಅಂಗವಿಕಲರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ವಿಆರ್‌ಡಬ್ಲ್ಯು ಎಂಆರ್‌ಡಬ್ಲ್ಯೂಗಳ ಬ್ಯಾಂಕ್‌ಗಳ ಸೇವೆಯನ್ನು ಹೊರಗುತ್ತಿಗೆ ಆಧಾರದಲ್ಲಿ ಪಡೆದು, ಅವರನ್ನು ಖಾಸಗಿ ನೌಕರಂತೆ ಕಾಣಲಾಗುತ್ತಿದೆ. ಸರಕಾರ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಇವರನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ವಿಕಲಚೇತನರನ್ನು ಮದುವೆಯಾಗುವ ವ್ಯಕ್ತಿಗಳಿಗೆ ೩ ಲಕ್ಷ ರು. ಪ್ರೋತ್ಸಾಹಧನ ನೀಡಬೇಕು. ವಿಕಲಚೇತನರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ರಾಜಕೀಯ ಮೀಸಲಾತಿ ನೀಡಬೇಕು. ಅಂಗವಿಕಲ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು. ಐಸಿಡಿಎಸ್ ಯೋಜನೆಯಡಿ ದೀರ್ಘಕಾಲದಿಂದಲೂ ಕೆಲಸ ಮಾಡುತ್ತಿರುವ ಅಂಗನವಾಡಿ ನೌಕರರನ್ನು ಖಾಯಂ ಮಾಡುವ ಜೊತೆಗೆ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ, ಅಂಗವಿಕಲರನ್ನು ಹೊಂ ಗಾರ್ಡ್‌ಗಳಾಗಿ ನೇಮಕ ಮಾಡಬೇಕು. ಕೆ.ಎಸ್.ಆರ್.ಟಿ.ಸಿ ನೌಕರರಿಗೆ ಸರಕಾರಿ ನೌಕರರಂತೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು. ಪೌರಕಾರ್ಮಿಕರ ಖಾಯಂ, ಗ್ರಾಮ ಸಹಾಯಕರನ್ನು ಡಿ.ಗ್ರೂಫ್ ನೌಕರರೆಂದು ಪರಿಗಣಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟ ಆರಂಭಿಸಿದ್ದೇವೆ. ದಿನಕ್ಕೆ ೧೦ ಕಿ.ಮಿ ನಂತೆ ಪಾದಯಾತ್ರೆ ಮೂಲಕ ಸಾಗಿ, ಸಂಘ,ಸಂಸ್ಥೆಗಳು, ದಾನಿಗಳ ಸಹಕಾರದಿಂದ ಹೋರಾಟ ಮುಂದುವರೆಸಿದ್ದು, ಬೆಂಗಳೂರಿಗೆ ತೆರಳಿದ ನಂತರ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಸರ್ಕಾರ ಕೂಡಲೇ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ಆಗ್ರಹವಾಗಿದೆ ಎಂದರು. ಈ ಸಂಬಂಧ ಮನವಿಯನ್ನು ನಗರಪಾಲಿಕೆಯ ಆಯುಕ್ತರಾದ ಆಶ್ವಿಜ ಅವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಿದರು.