ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಮುಂಗಾರು ಮತ್ತು ಹಿಂಗಾರು ಮಳೆ ಕ್ಷೀಣವಾದ ಪರಿಣಾಮ ನೀರಿನ ಕೊರತೆಯಿಂದ ತಾಲೂಕಿನ ರೈತರು ಭತ್ತ ಬೆಳೆಯಲು ಸಾಧ್ಯವಾಗಿಲ್ಲ. ಈ ಕಾರಣದಿಂದ ತಾಲೂಕಿನಲ್ಲಿ ಭತ್ತದ ಬೆಳೆಗೆ ಹಿನ್ನೆಡೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಕುಮಾರ್ ಹೇಳಿದರು.ಶುಕ್ರವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಲ್ಪಸ್ವಲ್ಪ ಸುರಿದ ಮಳೆಯಿಂದ ಭತ್ತ ಬೆಳೆದ ದೊಡ್ಡ ಹಿಡುವಳಿದಾರರು ಕೊಳವೆಬಾವಿ ಮೂಲಕ ನೀರು ಹಾಯಿಸಿಕೊಂಡು, ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ, ಭತ್ತಕ್ಕೆ ಪರ‍್ಯಾಯವಾಗಿ ಬೆಳೆದ ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳೂ ಸಹ ನೀರಿಲ್ಲದೇ ಸೊರಗುತ್ತಿವೆ ಎಂದು ಮಾಹಿತಿ ನೀಡಿದ ಅವರು, ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಹಲವು ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
5 ಕುಷ್ಠರೋಗ ಪ್ರಕರಣ:ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್‌ಕುಮಾರ್ ಮಾತನಾಡಿ, ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ 5 ಕುಷ್ಠರೋಗ ಪ್ರಕರಣಗಳು ಕಂಡುಬಂದಿದೆ. ಜಡೆ ಗ್ರಾಮ ಪಂಚಾಯಿತಿಯನ್ನು ಕ್ಷಯಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ತಾಲೂಕಿನಲ್ಲಿ ಯಾವುದೇ ಕೆಎಫ್‌ಡಿ ಪ್ರಕರಣ ದಾಖಲಾಗಿಲ್ಲ. ಪಲ್ಸ್ ಪೋಲಿಯೋ ಹೆಚ್ಚುವರಿ ಲಸಿಕೆ ನೀಡುವಂತೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಆಡಳಿತಾಧಿಕಾರಿ, ಜಂಟಿ ಕೃಷಿ ನಿರ್ದೇಶಕಿ ಜಿ.ಸಿ. ಪೂರ್ಣಿಮಾ ಮಾತನಾಡಿ, ಮಳೆಯ ಕೊರತೆಯಿಂದ ಸರ್ಕಾರವು ವಿವಿಧ ಇಲಾಖೆಗಳ ಅಡಿಯಲ್ಲಿ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಹೇಳಿದರು.ಆದರ್ಶ ಗ್ರಾಮ ಯೋಜನೆ, ಕುಡಿಯುವ ನೀರು, ದಂಡಾವತಿ, ಭಾಗ್ಯಲಕ್ಷ್ಮೀ ಬಾಂಡ್, ಸುಕನ್ಯಾ ಸಮೃದ್ಧಿ ಯೋಜನೆ ಕುರಿತು ಸೋಮಶೇಖರ್ ಮಾಹಿತಿ ನೀಡಿದರು. ಕೃತಕ ಗರ್ಭಧಾರಣೆ, ಕಾಲುಬಾಯಿ ಲಸಿಕೆ, ಬರಡು ರಾಸು ಚಿಕಿತ್ಸೆ, ರೇಬಿಸ್ ಅರಿವು ಕಾರ್ಯಕ್ರಮ ಕುರಿತು ಪಶು ವೈದ್ಯಾಧಿಕಾರಿ ಡಾ. ಪ್ರದೀಪ್‌ಕುಮಾರ್ ಮಾಹಿತಿ ನೀಡಿದರು.
ಸಭೆಯಲ್ಲಿ ಅರಣ್ಯ ಇಲಾಖೆ, ಕೈಗಾರಿಕಾ ಇಲಾಖೆ, ಮೆಸ್ಕಾಂ, ಪುರಸಭೆ ಇಲಾಖೆಯ ಕಾರ್ಯವೈಖರಿ ಕುರಿತು ಚರ್ಚಿಸಲಾಯಿತು. ತಹಸೀಲ್ದಾರ್ ಹುಸೇನ್ ಸರಾಕವಸ್, ತಾಪಂ ಇಒ ಡಾ. ಪ್ರದೀಪ್‌ಕುಮಾರ್, ಕೃಷಿ ನಿರ್ದೇಶಕ ಕುಮಾರ್, ನಾಗರಾಜ್ ಅನ್ವೇಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ, ಲೋಕೋಪಯೋಗಿ ಇಲಾಖೆಯ ಚಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ಸೋಮಶೇಖರ್, ತೋಟಗಾರಿಕೆ ಇಲಾಖೆಯ ಮಂಜುನಾಥ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಇಕ್ಬಾಲ್ ಜಾತಿಗೇರ್, ತಾಲೂಕು ಕಚೇರಿಯ ರೇವಣಪ್ಪ, ನೀಲಪ್ಪ, ಮಮತಾ, ಶ್ರೀರಾಮ್ ಮೊದಲಾದವರಿದ್ದರು.- - - -23ಕೆಪಿಸೊರಬ01:
ಸೊರಬ ಪಟ್ಟಣದ ತಾಪಂ ಸಭಾಂಗಣದಲ್ಲಿ ಆಡಳಿತಾಧಿಕಾರಿ, ಜಂಟಿ ಕೃಷಿ ನಿರ್ದೇಶಕಿ ಜಿ.ಸಿ. ಪೂರ್ಣಿಮಾ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ್ಯ ಸಭೆ ನಡೆಯಿತು.