ಭಾರಿ ಮಳೆಗೆ ಮಕಾಡೆ ಮಲಗಿದ ಭತ್ತದ ಬೆಳೆ

| Published : Oct 25 2025, 01:00 AM IST

ಸಾರಾಂಶ

ಕಾರಟಗಿ ತಾಲೂಕಿನಲ್ಲಿ ವಾಡಿಕೆಯಿಂತ ಸರಾಸರಿ ಮಳೆ ಬಿದ್ದಿರುವುದು ದಾಖಲಾಗಿದೆ. ಕಾರಟಗಿ ಮಳೆ ಮಾಪಕ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ೭೨.೪ ಮಿಮಿ. ಸಿದ್ದಾಪುರದಲ್ಲಿ ೬೦ಮಿಮಿ ಮಳೆ ಬಿದ್ದಿದೆ

ಕಾರಟಗಿ: ತಾಲೂಕಿನಾದ್ಯಂತ ಕಳೆದ ೨೪ ಗಂಟೆಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು, ಮಳೆಯ ಹೊಡೆತಕ್ಕೆ ತಾಲೂಕಿನಾದ್ಯಂತ ಕಟಾವು ಮತ್ತು ತೆನೆ ಹಾಲು ಕಟ್ಟುವ ಹಂತಕ್ಕೆ ಬಂದಿದ್ದ ಭತ್ತದ ಬೆಳೆ ಮಕಾಡೆ ಮಲಗಿದೆ.

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗುರುವಾರ ಸಂಜೆ ಸ್ವಲ್ಪ ಜಿಟಿಜಿಟಿಯಿಂದ ಪ್ರಾರಂಭಗೊಂಡ ಮಳೆ ರಾತ್ರಿ ಸುಮಾರು ೧೦ ಗಂಟೆಯಿಂದ ಪ್ರಾರಂಭವಾದ ಭಾರಿ ಪ್ರಮಾಣದ ಗುಡುಗು ಸಿಡಿಲು ಸಹಿತ ಮಳೆ ಬೆಳಗಿನ ಜಾವದವರೆಗೂ ಬಿಟ್ಟುಬಿಡದೆ ಸುರಿದಿದೆ. ಹೀಗಾಗಿ ಭಾರಿ ಹನಿ, ಗಾಳಿಯ ಹೊಡೆತಕ್ಕೆ ಹಚ್ಚ ಹಸಿರು ಹೊತ್ತ ಭತ್ತದ ಬೆಳೆ ಸಂಪೂಣ ಮಕಾಡೆ ಮಲಗಿದ್ದು ರೈತ ಸಮೂಹ ಚಿಂತೆಗೀಡಾಗಿದೆ.

ಲಭ್ಯವಾದ ಮಾಹಿತಿ ಪ್ರಕಾರ ಕಾರಟಗಿ ತಾಲೂಕಿನಲ್ಲಿ ವಾಡಿಕೆಯಿಂತ ಸರಾಸರಿ ಮಳೆ ಬಿದ್ದಿರುವುದು ದಾಖಲಾಗಿದೆ. ಕಾರಟಗಿ ಮಳೆ ಮಾಪಕ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ೭೨.೪ ಮಿಮಿ. ಸಿದ್ದಾಪುರದಲ್ಲಿ ೬೦ಮಿಮಿ ಮಳೆ ಬಿದ್ದಿದೆ.

ಭಾರಿ ಹಾನಿ: ಮಳೆಯ ಹೊಡೆತಕ್ಕೆ ತಾಲೂಕಿನಾದ್ಯಂತ ಭತ್ತದ ಬೆಳೆ ಸಧ್ಯ ಮಕಾಡೆ ಮಲಗಿದೆ. ಕಾರಟಗಿ ಪಟ್ಟಣ ಸೀಮೆ, ಸಿದ್ದಾಪುರ ಮತ್ತು ಯರಡೋಣಾ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ಹಾನಿಯ ಕುರಿತು ಇನ್ನು ನಿಖರವಾಗಿ ಮಾಹಿತಿ ಲಭ್ಯವಾಗಿಲ್ಲ. ಆದರೆ, ಬೆಳೆ ತೆನೆ ಕಟ್ಟುವ ಮತ್ತು ಕಟಾವು ಹಂತಕ್ಕೆ ಬಂದ ಬೆಳೆ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತರು ಗೋಳಾಡುತ್ತಿದ್ದಾರೆ.

ಸಿದ್ದಾಪುರ ಹೋಬಳಿಯ ತುಂಗಭದ್ರ ನದಿ ತೀರದ ಪ್ರದೇಶದಲ್ಲಿ ಶೇ. ೮೦ರಷ್ಟು ಕಟಾವು ಹಂತಕ್ಕೆ ಬಂದಿದ್ದರೆ, ಎಡದಂಡೆ ಕಾಲುವೆಯ ಮೂಲಕ ಬಿತ್ತನೆಯಾದ ಬೆಳೆ ಈಗ ತೆನೆ ಕಟ್ಟುವ ಹಂತದಲ್ಲಿದೆ. ಸತತ ಸುರಿದ ಮಳೆಯಿಂದ ಗದ್ದೆಗಳಲ್ಲಿ ತೇವಾಂಶ ಹೆಚ್ಚಾಗಿದ್ದು, ಇದರಿಂದ ಭತ್ತದ ಬೆಳೆಗೆ ಕೊಳವೆ, ಬೆಂಕಿ ಕಾಂಡ ಕೊರಕ ರೋಗ, ಎಲೆ ಕೆಂಪಾವುದು ಸೇರಿದಂತೆ ನಾನಾ ರೋಗ ಕಾಣಿಸಿಕೊಳ್ಳುವ ಭೀತಿ ಹೆಚ್ಚಾಗಿದೆ.

ಚೆಳ್ಳೂರು, ಚೆಳ್ಳೂರು ಕ್ಯಾಂಪ್, ಹಗೇದಾಳ, ತೊಂಡಿಹಾಳ,೨೯ನೇ ಮೈಲ್ ಕ್ಯಾಂಪ್, ಹುಳ್ಕಿಹಾಳ, ಸಾಲುಂಚಿಮರ ಸೀಮೆಯಲ್ಲಿ ಭತ್ತದ ಬೆಳೆ ಗಾಳಿ ಹೊಡೆತಕ್ಕೆ ಭತ್ತ ಮಕಾಡೆ ಮಲಗಿದೆ. ಹೀಗಾಗಿ ಬೆಳಗ್ಗೆ ಹಗೇದಾಳ ಹೊರವಲಯದ ಬೆಳೆ ಗಂಟು ಕಟ್ಟಿ ನಿಲ್ಲುಸುವ ಪ್ರಯತ್ನ ರೈತ ಸಮೂಹ ಮಾಡುತ್ತಿದೆ.

ಇನ್ನು ಸಿದ್ದಾಪುರ, ಕಕ್ಕರಗೋಳ, ಬರಗೂರು, ನಂದಿಹಳ್ಳಿ, ಜಮಾಪುರ, ಉಳೇನೂರು, ಕೊಟ್ನೇಕಲ್ ಭಾಗದಲ್ಲಿ ವರುಣನ ಆರ್ಭಟಕ್ಕೆ ಭತ್ತ ಸೇರಿದಂತೆ ಸಜ್ಜೆ ಮತ್ತು ಸೂರ್ಯಕಾಂತಿ ಸಹ ನೆಲ ಕಚ್ಚಿದೆ. ಈಗಾಗಲೇ ರೈತ ಸಮೂಹ ಎಕರೆಗೆ ₹೪೦ ಸಾವಿರ ವೆಚ್ಚ ಮಾಡಿದ್ದು, ಕಟಾವು ಹಂತಕ್ಕೆ ಬಂದ ಬೆಳೆ ಮಕಾಡೆ ಮಲಗಿದ್ದು ರೈತರನ್ನು ಚಿಂತೇಗೀಡು ಮಾಡಿದೆ.

ಆಗ್ರಹ: ಮಳೆಯಿಂದ ನಷ್ಟವಾದ ಬೆಳೆಗೆ ರೈತರಿಗೆ ಪರಿಹಾರ ನೀಡಬೇಕೆಂದು ಉಳೇನೂರು ಎಐಕೆಕೆಎಂಎಸ್ ರೈತ ಸಂಘಟನೆ ಒತ್ತಾಯಿಸಿದೆ. ಸಂಘದ ಬಸವರಾಜಪ್ಪ ಅಳ್ಳಳ್ಳಿ, ಮಕ್ಕಣ್ಣ ಪಾಳ್ಯ ಸೇರಿದಂತೆ ಇನ್ನಿತರ ರೈತರು ಉಳೇನೂರು ಭಾಗದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿದರು.

ಭಾರಿ ರಭಸದಿಂದ ಸುರಿದ ಮಳೆಯಿಂದ ರೈತರ ಕನಸು ನುಚ್ಚುನೂರು ಮಾಡಿದೆ. ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಕಟಾವಿಗೆ ಬಂದ ಭತ್ತ ನೆಲಕ್ಕೂರುಳಿದ ಪರಿಣಾಮ ಕಂದಾಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ ಎಂ. ಕುಮಾರಸ್ವಾಮಿ ಆದೇಶ ಮೇರೆಗೆ ತಾಲೂಕಿನ ವಿವಿಧ ಗ್ರಾಮಗಳಿಗೆ ದೌಡಾಯಿಸಿದ್ದು ನೆಲಕಚ್ಚಿದ ಭತ್ತದ ವೀಕ್ಷಣೆ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಟ್ಟಣದ ಪಶು ಚಿಕಿತ್ಸಾಲಯದ ಆವರಣ, ಉನ್ನತೀಕರಿಸಿದ ಸರ್ಕಾರಿ ಬಾಲಕ, ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಜಲಾವೃತಗೊಂಡಿದೆ. ಶಾಲಾ ಕೊಠಡಿಗಳಲ್ಲಿ ಅಲ್ಲಲ್ಲಿ ಮಳೆ ನೀರು ಸೋರುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಶಾಲಾ ಕೊಠಡಿಯ ಮುಂಭಾಗದ ಕಟ್ಟೆಯ ಮೇಲೆ ಕೂಡಿಸಿ ಶಿಕ್ಷಕರು ಪಾಠ ಮಾಡಿದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಡಾ. ಅಭಿಲಾಷಾ ಪಿ.ಆರ್. ತಾಲೂಕಿನ ಯರಡೋಣಾ, ಸಿದ್ದಾಪೂರ ಹೋಬಳಿಯ ಮುಷ್ಟೂರ, ಈಳಿಗನೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಮಳೆಯಿಂದ ಹಾನಿಗೊಂಡ ಭತ್ತದ ಬೆಳೆ ವೀಕ್ಷಣೆ ಮಾಡಿ ಪರಿಶೀಲನೆ ಮಾಡಿದರು.

ಗುರುವಾರ ರಾತ್ರಿ ಸುರಿದ ಮಳೆಯಿಂದ ಬಹಳಷ್ಟು ಭತ್ತದ ಬೆಳೆ ಹಾನಿಗೊಂಡ ಬಗ್ಗೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ. ಮಳೆಯಿಂದ ಯಾವುದೇ ಜೀವಹಾನಿ ಆಸ್ತಿಹಾನಿ ಸಂಭವಿಸಿಲ್ಲ. ವೀಕ್ಷಣೆಯ ನಂತರ ಸಂಪೂರ್ಣ ಭತ್ತ ಹಾನಿಯ ಕುರಿತು ಸರ್ವೇ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ತಿಳಿಸಿದ್ದಾರೆ.