ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಪ್ರಾರಂಭ

| Published : Sep 25 2025, 01:00 AM IST

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರ ಪ್ರಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಹಾನಗಲ್ಲ, ರಾಣಿಬೆನ್ನೂರು, ಶಿಗ್ಗಾಂವಿ ಹಾಗೂ ಹಿರೇಕೆರೂರು/ ರಟ್ಟಿಹಳ್ಳಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲು ಸೂಚನೆ.

ಹಾವೇರಿ: ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಭತ್ತ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಟಾಸ್ಕಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಿಷ್ಟ ಬೆಂಬಲ ಬೆಲೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಭತ್ತ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಬೆಂಬಲ ಬೆಲೆ: ಬೆಂಬಲ ಬೆಲೆ ಯೋಜನೆಯಡಿ ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‌ಗೆ ₹2,369 ರಂತೆ ಹಾಗೂ ಗ್ರೇಡ್ ಎ ಭತ್ತ ಪ್ರತಿ ಕ್ವಿಂಟಾಲ್‌ಗೆ ₹2,389 ರಂತೆ ಭತ್ತ ಖರೀದಿಗೆ ಸೆ. 15ರಿಂದ ಅಕ್ಟೋಬರ್ 31ರ ವರೆಗೆ ರೈತರ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ಹಾಗೂ ನವೆಂಬರ್ 1ರಿಂದ 2026 ಫೆ.28ರ ವರೆಗೆ ನೋಂದಾಯಿತ ರೈತರಿಂದ ಭತ್ತವನ್ನು ಖರೀದಿಸಿ, ಮಿಲ್‌ಗಳಲ್ಲಿ ಶೇಖರಿಸುವ ಮತ್ತು ಪರಿವರ್ತಿಸುವ ಕಾರ್ಯ ಕೈಗೊಳ್ಳಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ.

ಖರೀದಿ ಕೇಂದ್ರಗಳ ವಿವರ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ಹಾನಗಲ್ಲ, ರಾಣಿಬೆನ್ನೂರು, ಶಿಗ್ಗಾಂವಿ ಹಾಗೂ ಹಿರೇಕೆರೂರು/ ರಟ್ಟಿಹಳ್ಳಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದಲ್ಲಿ ತೆರೆಯಲು ಸೂಚನೆ ನೀಡಿದರು.

ರೈತರಿಂದ ಖರೀದಿಸಿದ ಉತ್ಪನಗಳ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಬೇಕು ಎಂದು ಸೂಚನೆ ನೀಡಿದರು.

ಬೆಂಬಲ ಬೆಲೆಯಡಿ ಭತ್ತ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಿರುವ ಕುರಿತಂತೆ ವ್ಯಾಪಕ ಪ್ರಚಾರ ನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಭತ್ತ ಉತ್ಪನ್ನ ದಾಸ್ತಾನು ಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸೂಚನೆ ನೀಡಿದರು.

ನೋಡಲ್ ಅಧಿಕಾರಿಗಳ ನೇಮಕ: ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಹಾಗೂ ವ್ಯವಸ್ಥಿತವಾಗಿ ಸುಗಮವಾಗಿ ನಡೆಸಲು ಆಯಾ ತಾಲೂಕು ತಹಸೀಲ್ದಾರ್‌, ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ತಾಲೂಕು ನೋಡಲ್ ಅಧಿಕಾರಿಗಳಾಗಿ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರನ್ನು ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಭತ್ತ ಉತ್ಪನ್ನವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ಭತ್ತವನ್ನು ಖರೀದಿಸಲು ಅವಕಾಶವಿದೆ ಎಂದರು.

ಬಿತ್ತನೆ ಪ್ರದೇಶ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭತ್ತ ಉತ್ಪನ್ನ ಜಿಲ್ಲೆಯ 29,836 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಾನಗಲ್ಲ ತಾಲೂಕಿನ 14,620 ಹೆಕ್ಟರ್, ಶಿಗ್ಗಾವಿ- 6,681 ಹೆ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನಲ್ಲಿ 1,780 ಹೆ. ಹಾಗೂ ರಾಣಿಬೆನ್ನೂರ ತಾಲೂಕಿನ 6,220 ಹೆಕ್ಟರ್ ಪ್ರದೇಶದಲ್ಲಿ ಬಿತ್ತೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇದ್ದರು.