ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಗುರುವಾರ ಸಿಂಹ ಮಾಸದ ಆರಾಧನೊತ್ಸವವನ್ನು ಶ್ರದ್ಧಾ ಭಕ್ತಿಯಿಂದ ಅಚರಿಸಲಾಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಗುರುವಾರ ಸಿಂಹ ಮಾಸದ ಆರಾಧನೊತ್ಸವವನ್ನು ಶ್ರದ್ಧಾ ಭಕ್ತಿಯಿಂದ ಅಚರಿಸಲಾಯಿತು.ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಮೊದಲನೆಯದಾಗಿ ಪರದಂಡ ದೇವತಕ್ಕರು ಹಾಗೂ ದೇವಾಲಯಕ್ಕೆ ಸಂಬಂಧಪಟ್ಟ ತಕ್ಕ ಮುಖ್ಯಸ್ಥರ ಕುಟುಂಬದಿಂದ ಪಾಲ್ ಬೈವಾಡ್ ಆಗಮಿಸಿತು. ಬಳಿಕ ನಾಡಿನವರ ಸಮ್ಮುಖದಲ್ಲಿ ದೇವಾಲಯದ ಈಶಾನ್ಯ ಭಾಗದ ಅಯ್ಯಪ್ಪ ಕಟ್ಟೆಯ ಎದುರು ಪಚ್ಚಿ ಪರಿಯೊ ಅಂದರೆ ಪಿಸುಮಾತಿನ ಪ್ರಾರ್ಥನೆಯೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು.
ದೇವರ ನಡೆಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದ ಅಧ್ಯಕ್ಷರು ಮತ್ತು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಪ್ರಮುಖರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಈ ದಿನದಿಂದ ಕೊಡಗಿನ ಎಲ್ಲ ಹಬ್ಬ ಹರಿದಿನಗಳು ಉತ್ತಮವಾಗಿ ನಡೆದು ಸುಖ ಸಮೃದ್ಧಿ ಪ್ರಾಪ್ತಿಗೆ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಆರಾಧನೊತ್ಸವದಲ್ಲಿ ತುಲಾಭಾರ ಸೇವೆ, ಮಹಾ ಮಂಗಳಾರತಿ, ದೇವರ ನೃತ್ಯ ಬಲಿ, ತೀರ್ಥ ಪ್ರಸಾದ ಮತ್ತು ಅನ್ನದಾನ ನೆರವೇರಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಭಕ್ತ ಜನ ಸಂಘ ಹಾಗೂ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ತಕ್ಕ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.ಕಕ್ಕಡ ತಿಂಗಳಿನಲ್ಲಿ ಸುಮಾರು ಒಂದು ತಿಂಗಳ ಕಾಲ ಸ್ಥಗಿತಗೊಂಡಿದ್ದ ತುಲಾಭಾರ ಸೇವೆ ಉತ್ಸವಾದಿಗಳು ಪುನಃ ಆರಂಭಗೊಳ್ಳುವುದರೊಂದಿಗೆ ಕೊಡಗಿನ ಎಲ್ಲ ದೇವಸ್ಥಾನಗಳಲ್ಲಿ ಹಬ್ಬ ಹರಿದಿನಗಳು ಶುರುವಾಗಲು ಸಿಂಹ ಮಾಸದ ಆರಾಧನೆ ಮುನ್ನುಡಿಯಾಗಲಿದೆ.