ಸಾರಾಂಶ
ನರಸಿಂಹರಾಜ ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಶ್ರೀಮದ್ವಾದಿರಾಜ ಆರಾಧನಾ ಟ್ರಸ್ಟ್ ಹಾಗೂ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಆರ್. ಕೆ. ಪದ್ಮನಾಭ ರಚಿಸಿರುವ ಪುನರ್ ಮುದ್ರಿತ ಐದು ಕಾದಂಬರಿಗಳನ್ನು ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಗೀತ ಶಾಸ್ತ್ರ ಗ್ರಂಥಗಳ ಲೇಖಕ, ಗಾನಭೂಷಣ ಡಾ.ಆರ್. ಕೆ. ಪದ್ಮನಾಭ ರಚಿಸಿರುವ ಪುನರ್ ಮುದ್ರಿತ ಐದು ಕಾದಂಬರಿಗಳನ್ನು ನಗರದಲ್ಲಿ ಬಿಡುಗಡೆಗೊಳಿಸಲಾಯಿತು.ನರಸಿಂಹರಾಜ ಕಾಲೋನಿಯ ಪತ್ತಿ ಸಭಾಂಗಣದಲ್ಲಿ ಶ್ರೀಮದ್ವಾದಿರಾಜ ಆರಾಧನಾ ಟ್ರಸ್ಟ್ ಹಾಗೂ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ಅನುರಣನ ಕುರಿತು ವಿಚಾರ ಸಂಕಿರಣ ಹಾಗೂ ಹೊಸ ರಾಗಗಳಲ್ಲಿ ರಚಿಸಿರುವ ಕೃತಿಗಳ ಗಾಯನ ಕಾರ್ಯಕ್ರಮ ಜರುಗಿತು.
ಕಾದಂಬರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಂಕಣಕಾರ ಎನ್.ಎಸ್. ಶ್ರೀಧರಮೂರ್ತಿ, ಈ ಕಾದಂಬರಿಗಳು ವೈಶಿಷ್ಟ್ಯಪೂರ್ಣವಾಗಿವೆ. ಭಿನ್ನ ಶಿಸ್ತುಗಳ ಅಂತರ ಅಧ್ಯಯನಕ್ಕೆ ಈ ಕಾದಂಬರಿ ಅವಕಾಶ ಮಾಡಿಕೊಟ್ಟಿವೆ. ಸಂಗೀತಗಾರರೊಬ್ಬರು ಐದು ಕಾದಂಬರಿಗಳನ್ನು ರಚಿಸಿರುವುದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ದಾಖಲೆ ಎಂದರು.ಕನ್ನಡವೇ ಸತ್ಯ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರ ಮಾತನಾಡಿ, ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಶೀಘ್ರದಲ್ಲೇ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಮಂತ್ರಾಲಯದ ಗುರು ರಾಘವೇಂದ್ರರ ಬಗ್ಗೆ ರಚಿಸಿರುವ ಪ್ರಾರ್ಥನಾ ಗೀತೆಯನ್ನು ಹಾಡುವ ಮೂಲಕ ಪದ್ಮನಾಭ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.