ಸಾರಾಂಶ
ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಸಿಟಿವಿಎಸ್ ತಂಡವು ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡು ಸೇರಿದ್ದ ತೆಂಗಿನ ಗರಿ ಹಾಗೂ ಲೋಹದ ಚೈನ್ ಹೊರತೆಗೆಯುವ ಮೂಲಕ ಜೀವದಾನ ನೀಡಿದ ವೈದ್ಯರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಸಿಟಿವಿಎಸ್ ತಂಡವು ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡು ಸೇರಿದ್ದ ತೆಂಗಿನ ಗರಿ ಹಾಗೂ ಲೋಹದ ಚೈನ್ ಹೊರತೆಗೆಯುವ ಮೂಲಕ ಜೀವದಾನ ನೀಡಿದ ವೈದ್ಯರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಸನ್ಮಾನಿಸಿದರು.ಬಳಿಕ ಮಾತನಾಡಿದ ಪದ್ಮರಾಜ್, ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನ. ವೆನ್ಲಾಕ್ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಸುರೇಶ್ ಪೈ ನೇತೃತ್ವದ ತಂಡ ಅಪೂರ್ವ ಶಸ್ತ್ರಚಿಕಿತ್ಸೆ ಮೂಲಕ ಬಾಲಕನಿಗೆ ಜೀವದಾನ ಮಾಡಿ ಉತ್ತಮ ಸಂದೇಶ ನೀಡಿದೆ. ದಿನೇಶ್ ಗುಂಡೂರಾವ್ ಆರೋಗ್ಯ ಸಚಿವರಾದ ಬಳಿಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತೆ ಸರ್ಕಾರಿ ಆಸ್ಪತ್ರೆಗಳು ಬೆಳೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸುರೇಶ್ ಪೈ, ವೆನ್ಲಾಕ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಇಲ್ಲಿನ ಚಿಕಿತ್ಸೆ ಬಗ್ಗೆ ಯಾವುದೇ ಮುಜುಗರ ಬೇಡ. ಖಾಸಗಿ ಆಸ್ಪತ್ರೆಗೂ ಮೀರುವಂತಹ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಪ್ರಚಾರದಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಹೇಳಿದರು.ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ವಿಭಾಗದ ಡಾ.ಸುರೇಶ್ ಪೈ, ಡಾ.ಸೂರಜ್ ಪೈ, ನರ್ಸಿಂಗ್ ಅಧಿಕಾರಿ ವಹೀದಾ, ಡಾ.ಪ್ರಣವ್, ಡಾ.ಶುಭಂ ಗುಪ್ತಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಶಿವಪ್ರಕಾಶ್, ಪ್ರಾದೇಶಿಕ ವೈದ್ಯಕೀಯ ಅಧಿಕಾರಿ ಡಾ.ಸುಧಾಕರ್, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪದ್ಮನಾಭ ಅಮೀನ್, ಪ್ರಮೀಳಾ ಈಶ್ವರ್, ಶಶಿಧರ ಕೊಠಾರಿ, ಅನಿಲ್ ಮತ್ತಿತರರು ಇದ್ದರು.