ಸಾರಾಂಶ
ಸಮಾಜದ ಬೃಹತ್ ಸಮಾವೇಶದಲ್ಲಿ 6 ನಿರ್ಣಯ । ವಿವಿಧ ಕ್ಷೇತ್ರಗಳ ಸಮಾಜದ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಬೀದರ್ಪದ್ಮಶಾಲಿ ಸಮಾಜವು ರಾಜ್ಯ ಮತ್ತು ರಾಷ್ಟ್ರಾದ್ಯಂತ ಸಂಘಟಿತ ಹೋರಾಟ ಮತ್ತು ಐಕ್ಯತೆಗಾಗಿ ಸಮಾವೇಶದ ಮೂಲಕ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಪದ್ಮಶಾಲಿ ಸಮಾಜ ಸಮಿತಿಯ ಗೌರವಾಧ್ಯಕ್ಷ ರಾಮಕೃಷ್ಣನ್ ಸಾಳೆ ಕರೆ ನೀಡಿದರು.
ನಗರದ ರಾಂಪೂರೆ ಕಾಲೋನಿಯಲ್ಲಿರುವ ಗುರುದತ್ತ ಧ್ಯಾನ ಮಂದಿರ ಸಭಾಂಗಣದಲ್ಲಿ ಪದ್ಮಶಾಲಿ ಸಮಾಜ ಸಮಿತಿ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ ‘ಪದ್ಮಶಾಲಿ ಸಮಾಜ ಬೃಹತ್ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿ, ಪದ್ಮಶಾಲಿ ಸಮಾಜ ಪರಿಶ್ರಮದಿಂದ ದುಡಿಯುವ ಸಮಾಜವಾಗಿದೆ. ಆದರೆ ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎಂದು ಹೇಳಿದರು.ಅತ್ಯಂತ ಹಿಂದುಳಿದ ಸಮಾಜವಾಗಿದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಒಗ್ಗಟ್ಟಿನಿಂದ ಬದುಕಬೇಕು. ಮಾರ್ಕಂಡೇಯ ಜಯಂತಿ ತಪ್ಪದೇ ಆಚರಣೆ ಮಾಡಿ ಭಕ್ತಿ ಶೃದ್ಧೆ ಮತ್ತು ನಿಷ್ಠೆ ಹಾಗೂ ಪ್ರಾಮಾಣಿಕತೆಯೇ ತಮ್ಮ ಉಸಿರಾಗಿಸಿಕೊಳ್ಳಬೇಕು. ಮಹಿಳೆಯರು ಕೂಡಾ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಲು ಮುಂದೆ ಬರಬೇಕೆಂದು ಸಾಳೆ ಕರೆ ನೀಡಿದರು.
ಸಮಾವೇಶದಲ್ಲಿ 6 ನಿರ್ಣಯ:ನಗರದಲ್ಲಿ ಭಾನುವಾರ ನಡೆದ ಸಮಾಜದ ಸಮಾವೇಶದಲ್ಲಿ 6 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇದರಲ್ಲಿ ಪದ್ಮಶಾಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವುದು. ಪದ್ಮಶಾಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಒಂದು ಸಿಎ ನಿವೇಶನ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದು. ಸ್ಕಿಲ್ ಡೆವೆಲಪ್‌ಮೆಂಟ್‌ಗಳಂತಹ ಕೆಲಸಗಳನ್ನು ಸಮಾಜದ ಮಹಿಳೆಯರಿಗೆ ನೀಡಿ ಸರ್ಕಾರ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು. ಸಮಾಜದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಬೇಕು ಮತ್ತು ಸರ್ಕಾರಿ ನೌಕರಿಗಳಲ್ಲಿ ಸಡಿಲ ನೀತಿ ಅಳವಡಿಸಬೇಕು. ಕೈಗಾರಿಕೆಯಲ್ಲಿ ಹೆಚ್ಚಿನ ಆದ್ಯತೆ ನೀಡಿ ಪರವಾನಗಿ ಮತ್ತು ಧನಸಹಾಯ ಸರ್ಕಾರ ನೀಡಬೇಕು. ಸಮಾಜದ ಸಂಘಟನೆಗಾಗಿ ರಾಷ್ಟ್ರಾದ್ಯಂತ ಸಮಾವೇಶ ಆಯೋಜಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪದ್ಮಶಾಲಿ ಸಮಾಜದ ಜಿಲ್ಲಾಧ್ಯಕ್ಷ ಮೋಹನ ಬಾಚಾ ನಿರ್ಣಯಗಳನ್ನು ಮಂಡಿಸಿದರು. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜಕುಮಾರ ಬಿಜ್ಜಾ ಅನುಮೋದಿಸಿದರು. ಸಮಾವೇಶದಲ್ಲಿ ನೆರೆದ ಎಲ್ಲಾ ಸಮಾಜ ಬಾಂಧವರು ಒಪ್ಪಿಗೆ ಸೂಚಿಸಿದರು.ಹೈದ್ರಾಬಾದ್‌ನ ಅಖಿಲ ಭಾರತ ಪದ್ಮಶಾಲಿ ಸಂಘದ ಅಧ್ಯಕ್ಷ ಕಂದಗಟ್ಲ ಸ್ವಾಮಿ, ಪದ್ಮಶಾಲಿ ಉತ್ತರ ಕರ್ನಾಟಕ ಪ್ರಾಂತ ಸಂಘದ ಅಧ್ಯಕ್ಷ ಕಾಳಪ್ಪ ಕೊಂಗತಿ, ಸಂಘದ ಹೈದ್ರಾಬಾದಿನ ಪ್ರಧಾನ ಕಾರ್ಯದರ್ಶಿ ಗಡ್ಡಂ ಜಗನ್ನಾಥ, ಸಂಘದ ಹುಬ್ಬಳ್ಳಿ ಕಾರ್ಯದರ್ಶಿ ರವೀಂದ್ರ ಸಗ್ಗಂ, ಸಂಘದ ಹೈದ್ರಾಬಾದಿನ ಕಾರ್ಯಕಾರಿಣಿ ಸದಸ್ಯೆ ರುಕ್ಮಿಣಿ ಗಣೇಶ ಸಂಗಾ, ನೇಕಾರರ ಸಮುದಾಯಗಳ ಒಕ್ಕೂಟದ ಕಲಬುರಗಿ ಅಧ್ಯಕ್ಷ ಪ್ರದೀಪ್ ಸಂಗಾ, ಚಿಟಗುಪ್ಪಾ ಅಧ್ಯಕ್ಷ ವೀರಪ್ಪ ಜಟಲಾ, ಜಹಿರಾಬಾದ ಅಧ್ಯಕ್ಷ ಗಡ್ಡಮ್ ಜನಾರ್ಧನ್, ಸದಾಶಿವಪೇಟ್ ಅಧ್ಯಕ್ಷ ಮ್ಯಾಕಲ್ ಜನಾರ್ಧನ್, ಸಂಗಾರೆಡ್ಡಿ ಅಧ್ಯಕ್ಷ ಕೊಪ್ಪೇರಿ ವೆಂಕಟ್ ಹರಿಹರ ಕಿಶನ್, ಬೀದರ ನಿರ್ದೇಶಕ ಪುನೀತ್ ಸಾಳೆ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ ಸಮಾಜದ ಪ್ರಮುಖರು ಹಾಜರಿದ್ದರು.
ಸಮಾಜಕ್ಕಾಗಿ ಹಲವಾರು ವರ್ಷಗಳಿಂದ ದುಡಿದ ರಾಮಕೃಷ್ಣನ್ ಸಾಳೆ ಅವರಿಗೆ ಪದ್ಮಶಾಲಿ ಸಮಾಜದಿಂದ ‘ಸಮಾಜ ಶಿಲ್ಪಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಮಾಜದ ಕುಲಬಾಂಧವರಿಗೆ ಸನ್ಮಾನಿಸಲಾಯಿತು.ಸಮಿತಿ ನಿರ್ದೇಶಕ ಸೂರ್ಯಕಾಂತ ಕುಚನ್ ನಿರೂಪಿಸಿದರು. ಟ್ರಸ್ಟ್ ಕಾರ್ಯದರ್ಶಿ ಕಿರಣಕುಮಾರ ಬಿ.ದೋಮಲ್, ದಿಡ್ಡಿ ಚಂದ್ರಕಾಂತ ವಂದಿಸಿದರು.