ಪದ್ಮಶ್ರೀ ಪುರಸ್ಕೃತ‌ ಸತ್ಯನಾರಾಯಣ ಬೆಳೇರಿ ಅವರ ಕುರಿತು ಲೇಖಕ ನರೇಂದ್ರ ರೈ ದೇರ್ಲ ಅವರು ಬರೆದ ‘ಭತ್ತದ ತಳಿಯ ಕಾವಲುಗಾರ’ ಕೃತಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು.

ಮಂಗಳೂರು: ಪದ್ಮಶ್ರೀ ಪುರಸ್ಕೃತ‌ ಸತ್ಯನಾರಾಯಣ ಬೆಳೇರಿ ಅವರ ಕುರಿತು ಲೇಖಕ ನರೇಂದ್ರ ರೈ ದೇರ್ಲ ಅವರು ಬರೆದ ‘ಭತ್ತದ ತಳಿಯ ಕಾವಲುಗಾರ’ ಕೃತಿ ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಗುರುವಾರ ಲೋಕಾರ್ಪಣೆಗೊಂಡಿತು.ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯ ಸಮಿತಿ ಹಾಗೂ ಬೆಳೇರಿ ಅಭಿಮಾನಿ ಬಳಗದ ನೇತೃತ್ವದಲ್ಲಿ ಸಂಯೋಜಿಸಿದ ಸಮಾರಂಭ ಯುಗಾದಿ ದಿನದಂದು ಕೃಷಿ ಸಂಸ್ಕೃತಿ, ಸಾಧಕರನ್ನು ನಮಿಸಿದ ಸಂಭ್ರಮವಾಯಿತು.

ಸಮಾರಂಭವನ್ನು ಪ್ರಗತಿಪರ ಕೃಷಿಕ, ಸಹಕಾರಿ ಧುರೀಣ, ಸಾಮಾಜಿಕ ಮುಂದಾಳು ಕಲ್ಲಗ ಚಂದ್ರಶೇಖರ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಅವರು, ಪದ್ಮಶ್ರೀ ಮೂಲಕ ಬೆಳ್ಳೂರಿಗೆ ಕೀರ್ತಿ ತಂದ ಬೇಳೇರಿ ಅವರು ಈ ನಾಡಿನ ಸೊತ್ತು. 650ಕ್ಕೂ ಅಧಿಕ ಭತ್ತದ ತಳಿ ಸಂರಕ್ಷಿಸಿ ಪ್ರತಿಷ್ಠಿತ ಪದ್ಮಶ್ರೀ ಮುಡಿದ ಸತ್ಯನಾರಾಯಣ ಬೆಳೇರಿ ಅವರ ಪ್ರಶಸ್ತಿ, ಪಾರಿತೋಷಕ ಸಹಿತ ತಳಿ ಸಂರಕ್ಷಣೆಗೆ ಯೋಗ್ಯ ಸೌಕರ್ಯ, ಸೌಲಭ್ಯ ಒದಗಿಸಿಕೊಟ್ಟು ಪ್ರೋತ್ಸಾಹದ ನೈತಿಕ ಬೆಂಬಲ ನೀಡಬೇಕಾಗಿರುವುದು ನಾಡಿನ ಪ್ರಜ್ಞಾವಂತರ ಹೊಣೆಗಾರಿಕೆ ಎಂದರು.ಕೃತಿಕಾರ ನರೇಂದ್ರ ರೈ ದೇರ್ಲ ಮಾತನಾಡಿ, ರಾಜಕೀಯದವರಿಗೆ ಕೃಷಿ ಅರಿವು, ಆಸಕ್ತಿ ಎರಡೂ ಕಡಿಮೆ. ಆದ್ದರಿಂದಲೇ ಕೃಷಿಗೆ ಮನ್ನಣೆ ಸಿಗುತ್ತಿಲ್ಲ ಎಂದರು.

ಈ ಕೃತಿ ಒಂದು ತತ್ವದ ಪಯಣ ಎಂದ ಅವರು ಅತ್ಯಂತ ಕಡಿಮೆ ಭೂಮಿಯಲ್ಲೂ ದೊಡ್ಡ ಸಾಧನೆ ಸಾಧ್ಯ ಎಂಬುದಕ್ಕೆ ಸಾಧ್ಯ ಎಂಬುದರ ಸಂಕೇತ. ಆದ್ದರಿಂದಲೇ ಕೃತಿ ಓದುಗನ ಎದೆಯೊಳಗೆ ಬಿಡುಗಡೆ ಆಗಬೇಕು, ಓದುತ್ತಾ ಓದುತ್ತಾ ಓದುಗನೊಳಗೆ ಮಾತನಾಡಬೇಕು ಎಂದರು.ಕಾಸರಗೋಡಿನ ಹಿರಿಯ ಲೇಖಕ ನರಸಿಂಗ ರಾವ್ ಕಾಸರಗೋಡು ಅವರು ‘ಭತ್ತದ ತಳಿಯ ಕಾವಲುಗಾರ’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಸತ್ಯನಾರಾಯಣ ಬೆಳೇರಿ ಅವರಿಗೆ ಪದ್ಮಶ್ರೀ ದೊರೆಯಲು ಮಾರ್ಗದರ್ಶಕರಾಗಿ ಸಹಕರಿಸಿದ ಕರ್ನಾಟಕ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿಗಳಾದ ಡಾ. ಉಲ್ಲಾಸ್ ಹಾಗೂ ಡಾ. ಮಲ್ಲಿಕಾರ್ಜುನ ಎಲ್. ಅವರಿಗೆ ಮೊದಲ ಪ್ರತಿ ನೀಡಲಾಯಿತು.

ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಪಯ್ಯನ್ನೂರಿನ ಮಹಾವಿಷ್ಣು ದೇವಾಲಯದ ಮುಗುಳಿಯೊಳಗಿಂದ ದೊರೆತ ಶತಮಾನಕ್ಕೂ ಮೊದಲಿನ ಭತ್ತವನ್ನು ಸತ್ಯನಾರಾಯಣ ಬೆಳೇರಿ ಸಂಗ್ರಹಕ್ಕೆ ಅವರು ಹಸ್ತಾಂತರಿಸಿದರು.ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದ ಆಡಳಿತ ಮೊಕ್ತೇಸರ ಗಂಗಾಧರ ಬಲ್ಲಾಳ್, ಕ. ಸಾ. ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ. ಮೋಹನದಾಸ್ ರೖ ಬೆಳ್ಳೂರು ಅತಿಥಿಗಳಾಗಿದ್ದರು.

ದಯಾನಂದ ರೈ ಕಳುವಾಜೆ ಸ್ವಾಗತಿಸಿ, ಕುಂಞಿರಾಮ ಮಣಿಯಾಣಿ ವಂದಿಸಿದರು. ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ನಿರೂಪಿಸಿದರು.