ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಬ್ರಹ್ಮಕಲಶೋತ್ಸವ, ನಾಗಮಂಡಲ, ಭಜನೋತ್ಸವ, ಯಕ್ಷೋತ್ಸವದಂತಹ ದೇವತಾ ಕಾರ್ಯಗಳು ಸಮಾಜದಲ್ಲಿ ಯುವ ಸಮುದಾಯ ತಪ್ಪು ದಾರಿ ಹಿಡಿಯದಂತೆ ಧಾರ್ಮಿಕ ಪ್ರಜ್ಞೆ ಮೂಡಿಸುತ್ತವೆ ಎಂದು ದೇವಸ್ಥಾನ ಜೀಣೋದ್ಧಾರ-ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ, ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.ನೀರುಮಾರ್ಗ ಸಮೀಪದ ಪಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಪ್ರಸ್ತುತ ಕಾಲಘಟ್ಟದಲ್ಲಿ ಯುವ ಸಮುದಾಯದ ಬಗ್ಗೆ ಸಮಾಜದಲ್ಲಿ ಆತಂಕ ಇರುವಂತಹುದೇ. ಆದರೆ ಧಾರ್ಮಿಕ ಕಾರ್ಯಕ್ರಮದಲ್ಲಿ ಯುವ ಸಮುದಾಯ ತೊಡಗಿಸಿಕೊಳ್ಳುವ ರೀತಿ ನೋಡುವಾಗ ಖುಷಿಯಾಗುತ್ತಿದೆ. ಇದರಿಂದ ಸಮಾಜದಲ್ಲಿ ದುಶ್ಚಟ, ದುಷ್ಟಕೂಟದಿಂದ ದೂರವಿರಲು ಸಾಧ್ಯವಾಗಲಿದೆ. ದೇವಳ ಅಭಿವೃದ್ಧಿ ಊರಿಗೆ ಕ್ಷೇಮವಾಗಿದೆ. ನಮ್ಮಲ್ಲಿ ನಂಬಿಕೆ, ಸಂಸ್ಕಾರ ಜಾಗೃತಗೊಳ್ಳುತ್ತದೆ. ಧಾರ್ಮಿಕ ಪ್ರಜ್ಞೆ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಲಿದೆ ಎಂದರು.ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಗ್ರಾಮೀಣ ಭಾಗದಲ್ಲಿ ದೇವಸ್ಥಾನ, ಭಜನಾ ಮಂದಿರ, ದೈವಸ್ಥಾನಗಳ ಮೂಲಕ ಒಳ್ಳೆಯ ಸಂಸ್ಕಾರ ಸಿಗುವ ಕೆಲಸವಾಗುತ್ತಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆ ಗ್ರಾಮಕ್ಕೆ ಒಂದು ರೀತಿ ಚೈತನ್ಯವನ್ನು ನೀಡುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ- ಬ್ರಹ್ಮಕಲಶಾಭಿಷೇಕ ಸಮಿತಿ ಗೌರವಾಧ್ಯಕ್ಷ ಬಿ. ಚಿತ್ತರಂಜನ್ ರೈ, ಕಾರ್ಯಾಧ್ಯಕ್ಷ ಸುಪ್ರೀತ್ ರೈ, ದೇವಸ್ಥಾನದ ಮೊಕ್ತೇಸರರಾದ ವೆಂಕಟಕೃಷ್ಣ ಭಟ್, ಪ್ರಧಾನ ಅರ್ಚಕರಾದ ತಾರನಾಥ ಭಟ್, ನೀರುಮಾರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್ ಚಿಕ್ಕಬೆಟ್ಟು, ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೃಷಿಕೇಶ್, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ ಸನತ್ ಕುಮಾರ್ ರೈ, ಪದ್ಮನಾಭ ಆಳ್ವ, ಪ್ರಧಾನ ಕಾರ್ಯದರ್ಶಿ ಕಿಶೋರ್ ಉಗ್ಗಕೋಡಿ ಇದ್ದರು.
ಅಶ್ವಿನಿ ಶೆಟ್ಟಿಬೊಂಡಂತಿಲ ನಿರೂಪಿಸಿದರು. ಗೋಕುಲ್‌ದಾಸ್ ಶೆಟ್ಟಿ ವಂದಿಸಿದರು.