ಸಾರಾಂಶ
ಉಡುಪಿ, ದ.ಕ., ಚಿಕ್ಕಮಗಳೂರು, ಮಡಿಕೇರಿ, ಕಾಸರರೋಡು ಜಿಲ್ಲೆಗಳ ಪೊಲೀಸರಿಗೆ ಬೇಕಾಗಿದ್ದ ಕಳ್ಳರು
ಕನ್ನಡಪ್ರಭ ವಾರ್ತೆ ಉಡುಪಿಇತ್ತೀಚೆಗೆ ಪಡುಬಿದ್ರಿ, ಕೋಟ ಮತ್ತು ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿ ಕಳವು ಮಾಡಿದ್ದ ಕುಖ್ಯಾತ ಅಂತರ್‌ರಾಜ್ಯ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಕೊಯ್ಲ ಗ್ರಾಮದ ಕಲಾಯಿ ಹೌಸ್ ನಿವಾಸಿ ಇಬ್ರಾಹಿಂ ಕಲಂದರ್ ಹಾಗೂ ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದ ಬೇಕೂರು ನಿವಾಸಿ ಮಹಮ್ಮದ್ ರಿಯಾಜ್ ಆಲಿಯಾಸ್ ಕಡಪ್ಪ ರಿಯಾಜ್ ಬಂಧಿತ ಆರೋಪಿಗಳು.ಈ ಕಳ್ಳರು ಜೂನ್ 22ರಂದು ರಾತ್ರಿ ಪಡುಬಿದ್ರಿಯ ಪಾದೆಬೆಟ್ಟು ಗ್ರಾಮದ ಗಣೇಶ್ ಪ್ರಸಾದ್ ಶೆಟ್ಟಿ ಅವರ ಮನೆಯ ಬಾಗಿಲನ್ನು ಒಡೆದು 1,45,000 ರು. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಪಡುಬಿದ್ರಿ ಎಸೈಗಳಾದ ಸಕ್ತಿವೇಲು, ಅನಿಲ್ ಕುಮಾರ್ ಮತ್ತು ಸಿಬ್ಬಂದಿ ಕಳ್ಳರ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಕಾಸರಗೋಡು ಜಿಲ್ಲೆಯ ಕುಂಬಳೆಯ ಸಾಸ್ತ ನಗರದಲ್ಲಿ ಅವರನ್ನು ಬಂಧಿಸಿದ್ದಾರೆ. ಈ ಸಂದರ್ಭ ಅವರಿಂದ ಒಂದು ಕಾರು ಮತ್ತು 24,000 ರು. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.ಇಬ್ರಾಹಿಂ ಕಲಂದರ್ ಮೇಲೆ ಕಾಸರಗೋಡು ಜಿಲ್ಲೆಯ ಬದಿಯಡ್ಕ ಠಾಣೆಯಲ್ಲಿ 2 ದೇವಸ್ಥಾನ ಕಳವು, ವಿದ್ಯಾನಗರ ಠಾಣೆಯಲ್ಲಿ 1 ಮನೆ ಕಳವು, ಮಂಜೇಶ್ವರ ಠಾಣೆಯಲ್ಲಿ 1 ದರೋಡೆಗೆ ಪ್ರಯತ್ನ, ಮೇಲ್ಪರಂಭ ಠಾಣೆಯಲ್ಲಿ ಮನೆ ಕಳವು ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆಯಲ್ಲಿ ಮುನಿಯಾಲು ಸೊಸೈಟಿ ದರೋಡೆ, ದ.ಕ. ಜಿಲ್ಲೆಯ ವಿಟ್ಲ ಠಾಣೆಯಲ್ಲಿ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ ಅಡಕೆ ಕಳವು ಪ್ರಕರಣ, ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ 4 ಮನೆ ಕಳವು ಪ್ರಕರಣ, ಉಪ್ಪಿನಂಗಡಿ ಠಾಣೆಯಲ್ಲಿ ಅಂಗಡಿ ಕಳವು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಂಗಡಿ ಕಳವು, ಮಡಿಕೇರಿ ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ಕಳವು, ಚಿಕ್ಕಮಗಳೂರು ಜಿಲ್ಲೆಯ ಕಡಬ ಠಾಣೆಯಲ್ಲಿ ಸರ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈತ ಕೇರಳ ರಾಜ್ಯದ ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದಾನೆ.ಮೊಹಮ್ಮದ್ ರಿಯಾಜ್ ಅಲಿಯಾಸ್ ಕಾಸರಗೋಡು ಜಿಲ್ಲೆಯ ಕುಂಬಳೆ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಪುತ್ತೂರು ನಗರ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿದ್ದು, ಈತನು ಮೇನಲ್ಲಿ ಕಾಸರಗೋಡು ಸಬ್ ಜೈಲಿನಿಂದ ಬಿಡುಗಡೆ ಹೊಂದಿದ್ದಾನೆ.