ಪಡುಪಣಂಬೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ: ಅಪಘಾತ ಹೆಚ್ಚಳ ಚರ್ಚೆ

| Published : Feb 21 2025, 12:45 AM IST

ಪಡುಪಣಂಬೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ: ಅಪಘಾತ ಹೆಚ್ಚಳ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ಪಡುಪಣಂಬೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಪಡುಪಣಂಬೂರು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ವಿದ್ಯುತ್‌ ಸಮಸ್ಯೆ, ಕಾಂಕ್ರಿಟ್ ರಸ್ತೆ ಕಳಪೆ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ಮತ್ತಿತರ ವಿಷಯಗಳ ಬಗ್ಗೆ ತೀವ್ರ ಚರ್ಚೆ ಏರ್ಪಟ್ಟಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ವಿದ್ಯುತ್‌ ಸಮಸ್ಯೆ, ಕಾಂಕ್ರಿಟ್ ರಸ್ತೆ ಕಳಪೆ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ಮತ್ತಿತರ ವಿಷಯಗಳ ಬಗ್ಗೆ ಪಡುಪಣಂಬೂರು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ನಡೆದ ಪಡುಪಣಂಬೂರು ಗ್ರಾಮ ಪಂಚಾಯತ್ ನ 2024-25 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ತೀವ್ರ ಚರ್ಚೆ ಏರ್ಪಟ್ಟಿತು.

ಪಂಚಾಯಿತಿ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದ ಶಿಶು ಅಭಿವೃದ್ಧಿ ಇಲಾಖೆಯ ಉಪ ಸಹಾಯಕ ಹರೀಶ್ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.

ಗ್ರಾಮ ಸಭೆ ಆರಂಭವಾಗುತ್ತಲೇ ಮೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಯಾಡುತ್ತಿದ್ದು ಕೃಷಿ ಚಟುವಟಿಕೆ ತೀವ್ರ ತೊಂದರೆಯಾಗಿದೆ ಎಂದು ತಿಳಿಸಿದರು.

ಮೆಸ್ಕಾಂ ಇಲಾಖೆ ವಿದ್ಯುತ್ ದರ ಏರಿಸಿ ಪಂಚಾಯತಿಗೆ ವಿದ್ಯುತ್ ಬಿಲ್ ಸಂದಾಯ ಮಾಡುವುದು ದೊಡ್ಡ ಹೊರೆಯಾಗಿ ಪರಿಣಮಿಸಿದ್ದು ತಿಂಗಳಿಗೆ ಸುಮಾರು 1.5 ಲಕ್ಷ ರು. ಮೆಸ್ಕಾಂಗೆ ಸಂದಾಯ ಮಾಡುವುದೇ ಕಷ್ಟಕರವಾಗಿದೆ ಎಂದು ಪಂಚಾಯಿತಿ ಅಧ್ಯಕ್ಷ ಕುಸುಮಾ ಚಂದ್ರಶೇಖರ್ ಹೇಳಿದರು. ಮೆಸ್ಕಾಂ ಬಿಲ್‌ನಲ್ಲಿ ಪಂಚಾಯಿತಿಗಳಿಗೆ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿ ಪಡುಪಣಂಬೂರು ಜಂಕ್ಷನ್ ತೀರಾ ಅಪಾಯಕಾರಿಯಾಗಿ ಪರಿಣಮಿಸಿದ್ದು ಅನೇಕ ಅಪಘಾತಗಳು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಭಾಗದಲ್ಲಿ ಸಂಚಾರಿ ಪೊಲೀಸರನ್ನು ನೇಮಿಸಿ ಬೇಕಾಬಿಟ್ಟಿ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಹೇಳಿದರು.

ಇದಕ್ಕೆ ಪಂಚಾಯಿತಿ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯರು ಉತ್ತರಿಸಿ, ರಾಷ್ಟ್ರೀಯ ಹೆದ್ದಾರಿ ಮೂಲ್ಕಿ ಹಾಗೂ ಪಡುಪಣಂಬೂರು ಬಳಿ ಹೆದ್ದಾರಿ ಸರ್ವಿಸ್ ರಸ್ತೆಗೆ ಮಂಜೂರಾತಿ ದೊರೆತಿದ್ದು ಶೀಘ್ರದಲ್ಲಿ ಕಾರ್ಯ ಆರಂಭವಾಗಲಿದ್ದು ಅಪಘಾತ ನಿಯಂತ್ರಣಕ್ಕೆ ಬರಲಿದೆ ಎಂದರು.

ಗ್ರಾಮ ಪಂಚಾಯತಿ ವ್ಯಾಪ್ತಿಯ ಹತ್ತನೇ ತೋಕೂರು ನೀರಿನ ಟ್ಯಾಂಕ್ ಬಳಿ ಅಪಾಯಕಾರಿ ಮರ ತೆರವುಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪಂಚಾಯತ್ ವ್ಯಾಪ್ತಿಯಲ್ಲಿ ಸರ್ಕಾರಿ ನಿವೇಶನ ಗುರುತಿಸಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಪಡುಪಣಂಬೂರು ಅರಮನೆಯ ಎದುರು ಭಾಗದ ರಸ್ತೆ ಕಾಂಕ್ರಿಟ್‌ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯರಾದ ಮೋಹನ್ ದಾಸ್, ದಿನೇಶ್ ಹೊಸಲಕ್ಕೆ, ಪಂಚಾಯತಿ ಪಿಡಿಒ ಸುಧೀರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.