ಪಹಲ್ಗಾಮ್ ದಾಳಿ: ಹಿಂದೂಗಳ ವಿರುದ್ಧ ವ್ಯವಸ್ಥಿತ ಕೃತ್ಯ: ಮುತಾಲಿಕ್

| Published : Apr 24 2025, 12:35 AM IST

ಪಹಲ್ಗಾಮ್ ದಾಳಿ: ಹಿಂದೂಗಳ ವಿರುದ್ಧ ವ್ಯವಸ್ಥಿತ ಕೃತ್ಯ: ಮುತಾಲಿಕ್
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಮ್‌ ದಾಳಿಯನ್ನು ಪಾಕಿಸ್ತಾನದವರು, ಬಾಂಗ್ಲಾದವರು ಮಾಡಿದ್ದಾರೆ ಎಂದು ಕಾಶ್ಮೀರಿ ಮುಸ್ಲಿಮರನ್ನು ಬಚಾವ್‌ ಮಾಡಬೇಡಿ. ಸ್ಥಳೀಯ ಮುಸ್ಲಿಮರ ಸಹಕಾರವಿಲ್ಲದೆ ಇಂತಹ ಕೃತ್ಯ ಎಸಗುವುದು ಅಸಾಧ್ಯ. ಅ‍ವರಿಗೆ ಅಭಿವೃದ್ಧಿ ಬೇಕಿಲ್ಲ, ಶಾಂತಿ ನೆಲೆಸುವುದು ಬೇಕಿಲ್ಲ.

ಹುಬ್ಬ‍ಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿ ಇಸ್ಲಾಮಿಕ್‌ ಭಯೋತ್ಪಾದಕರ ಕೃತ್ಯ. ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಬಾರದು ಎಂದು ಇಸ್ಲಾಮಿಕ್ ಭಯೋತ್ಪಾದಕರು ವ್ಯವಸ್ಥಿತವಾಗಿ ಇಂತಹ ಕೃತ್ಯ ಎಸಗುತ್ತಿದ್ದಾರೆ. ಕೇಂದ್ರ ಸರ್ಕಾರ, ಗುಪ್ತಚರ ಇಲಾಖೆ ವೈಫಲ್ಯವೂ ಕಾರಣ. ಕೂಡಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿ ಅವರು ಮಾತನಾಡಿದರು.

ಆರ್ಟಿಕಲ್‌ 370 ರದ್ಧತಿ ನಂತರ ಕಣಿವೆ ರಾಜ್ಯದಲ್ಲಿ ಪ್ರವಾಸೋದ್ಯಮ ಗರಿಗೆದರಿತ್ತು. ಸ್ವಾತಂತ್ರ್ಯಾ ನಂತರ ಅಲ್ಲಿನ ಮಕ್ಕಳು ನಿರ್ಭೀತಿಯಿಂದ ಶಾಲೆ- ಕಾಲೇಜುಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ಇಲ್ಲಿವರೆಗೂ ಕಾಶ್ಮೀರಕ್ಕೆ 4 ಕೋಟಿಗೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇಂತಹ ವೇಳೆ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಬಾರದು. ಅಲ್ಲಿನ ಪ್ರವಾಸೋದ್ಯಮ ಬೆಳೆಯಬಾರದು ಎಂದು ಭಯೋತ್ಪಾದಕರು ಈ ನೀಚ ಕೃತ್ಯ ಎಸಗಿದ್ದಾರೆ. ಹಿಂದೂಗಳನ್ನೇ ಗುರಿಯಾಗಿಸಿ ನಡೆಸಿರುವ ಈ ನರಮೇಧದಿಂದ ಇದು ಇಸ್ಲಾಮಿಕ್‌ ಭಯೋತ್ಪಾದಕರ ಕೃತ್ಯವೇ ಎಂಬುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾಳಿಯನ್ನು ಪಾಕಿಸ್ತಾನದವರು, ಬಾಂಗ್ಲಾದವರು ಮಾಡಿದ್ದಾರೆ ಎಂದು ಕಾಶ್ಮೀರಿ ಮುಸ್ಲಿಮರನ್ನು ಬಚಾವ್‌ ಮಾಡಬೇಡಿ. ಸ್ಥಳೀಯ ಮುಸ್ಲಿಮರ ಸಹಕಾರವಿಲ್ಲದೆ ಇಂತಹ ಕೃತ್ಯ ಎಸಗುವುದು ಅಸಾಧ್ಯ. ಅ‍ವರಿಗೆ ಅಭಿವೃದ್ಧಿ ಬೇಕಿಲ್ಲ, ಶಾಂತಿ ನೆಲೆಸುವುದು ಬೇಕಿಲ್ಲ. ಇಸ್ಲಾಂ ಬೇಕಿದೆ, ಪಿಡಿಪಿ ಮೆಹಬೂಬಾ ಮುಪ್ತಿ ಬಂದ್‌ ಕರೆ ಕೊಟ್ಟಿದ್ದಾರೆ. ಈ ನಾಟಕ ನಿಲ್ಲಿಸಿ, ನೀವು ಸಿಎಂ ಆಗಿದ್ದ ಅವಧಿಯಲ್ಲಿ ಎಷ್ಟು ಭಯೋತ್ಪಾದಕ ಕೃತ್ಯಗಳಾಗಿವೆ ಎಂಬುದನ್ನು ಬಹಿರಂಗವಾದರೆ ನೀವು ಕೂಡ ಭಯೋತ್ಪಾದಕರು. ಈಗ ಬಂದ್‌ ಕರೆ ಕೊಟ್ಟು ನಾಟಕ ಮಾಡುವ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಅಮರನಾಥ ಯಾತ್ರೆ, ವೈಷ್ಣೋದೇವಿ ದೇವಸ್ಥಾನಕ್ಕೆ ಹೋಗುವವರ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿಗೆ ಹಿಂದೂಗಳು ಹೋಗದಂತೆ ಭಯ ಹುಟ್ಟಿಸುತ್ತಿದ್ದಾರೆ. ಭಯ ಸೃಷ್ಟಿಸುವ ಕಾರ್ಯದಲ್ಲಿ ಅವರು ಯಶಸ್ವಿಯಾಗಿದ್ದಾರೆ. ಎಲ್ಲಿವರೆಗೂ ಇಸ್ಲಾಮಿಕ್ ಭಯೋತ್ಪಾದನೆ ನಿಲ್ಲುವುದಿಲ್ಲವೋ ಈ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಹಿಂದೂ ಸಮಾಜ, ರಾಜಕಾರಣಿಗಳು, ಸರ್ಕಾರ, ಸೇನಾಪಡೆಗಳು ಇದನ್ನು ಅರಿತುಕೊ‍ಳ್ಳಬೇಕಿದೆ ಎಂದರು.

ಕಾಶ್ಮೀರದ ಮುಸ್ಲಿಮರು ಸರ್ಕಾರ, ಸೇನಾಪಡೆಗಳಿಗೆ ಸಹಕಾರ ಕೊಟ್ಟರೆ ದುಷ್ಕರ್ಮಿಗಳನ್ನು ಸೆದೆಬಡೆಯಲು ಸಾಧ್ಯ. ಅಲ್ಲಿನ ಮುಸ್ಲಿಮರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಒಂದು ವೇಳೆ ದುಷ್ಕೃತ್ಯಗಳಿಗೆ ಬೆಂಬಲ ಕೊಟ್ಟರೆ ದೇಶದ ಹಿಂದೂಗಳೆಲ್ಲ ನಿಮ್ಮ ವಿರುದ್ಧ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ದಾಳಿಗೆ ಕೇಂದ್ರ ಸರ್ಕಾರ, ಗುಪ್ತಚರ ಇಲಾಖೆ ವೈಫಲ್ಯವೂ ಕಾರಣ. ಇನ್ಮುಂದೆ ಶಾಂತಿ, ಸೌಹಾರ್ಧ ಸಾಧ್ಯವಿಲ್ಲ. ಕೂಡಲೇ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಕೃತ್ಯಕ್ಕೆ ಸೇಡು ತೀರಿಸಿಕೊಳ್ಳಬೇಕು. ಇಂತಹ ದಾಳಿಗಳು ನಡೆಯದಂತೆ ಹಿಂದೂಗಳು ಸಂಘಟಿತರಾಗಿ ಇದರ ವಿರುದ್ಧ ಹೋರಾಡಬೇಕಿದೆ ಎಂದು ಕರೆಕೊಟ್ಟರು.

ಡಿಜೆ ಹಳ್ಳಿ, ಕೆಜೆ ಹಳ್ಳಿ, ಹಳೇ ಹುಬ್ಬಳ್ಳಿ ಗಲಭೆ, ಮಂಗಳೂರು, ಶಿವಮೊಗ್ಗ ಸೇರಿ ಇತರೆಡೆ ಹಿಂದೂ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ ಅವರು ಕರ್ನಾಟಕದಲ್ಲೂ ಹಿಂದೂಗಳು ಸಂಘಟಿತರಾಗಬೇಕಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಕಾಟ್ಕರ್, ವೀರಯ್ಯಸ್ವಾಮಿ ಸಾಲಿಮಠ, ಬಸವರಾಜ, ಮಹಾಂತೇಶ ಸೇರಿದಂತೆ ಹಲವರಿದ್ದರು.