ಸಾರಾಂಶ
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿರುವ ನರಮೇಧ ಖಂಡಿಸಿ ಬುಧವಾರ ಸಂಜೆ ಮಾತೃ ಭೂಮಿ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿಯ ಸಹಯೋಗದಲ್ಲಿ ಪುತ್ತೂರಿನ ಗಾಂಧೀ ಕಟ್ಟೆಯ ಬಳಿಯಲ್ಲಿ ಶ್ರದ್ದಾಂಜಲಿ ಹಾಗೂ ಪ್ರತಿಭಟನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿ ಜಿಹಾದಿಗಳು ಹಿಂದೂಗಳನ್ನು ಗುರಿಯಾಗಿಸಿ ಮಾರಣ ಹೋಮ ನಡೆಸಿದ್ದಾರೆ. ಈ ಕೃತ್ಯಕ್ಕೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸುವ ಹುನ್ನಾರ ನಡೆಯುತ್ತಿದೆ. ಆದರೆ ಈ ಕೃತ್ಯಕ್ಕೆ ಅಲ್ಲಿನ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಆರೋಪಿಸಿದ್ದಾರೆ.ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿರುವ ನರಮೇಧ ಖಂಡಿಸಿ ಬುಧವಾರ ಸಂಜೆ ಮಾತೃ ಭೂಮಿ ಸಂರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿಯ ಸಹಯೋಗದಲ್ಲಿ ಪುತ್ತೂರಿನ ಗಾಂಧೀ ಕಟ್ಟೆಯ ಬಳಿಯಲ್ಲಿ ಶ್ರದ್ದಾಂಜಲಿ ಹಾಗೂ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಜಿಹಾದಿ ಮಾನಸಿಕತೆಯ ವಿರುದ್ದ ನಾವೆಲ್ಲರೂ ಒಟ್ಟಾಗಿ ಪ್ರತಿಭಟಿಸದಿದ್ದಲ್ಲಿ ನಮಗೆ ಉಳಿಗಾಲವಿಲ್ಲ ಎಂಬುದು ಅರಿತುಕೊಳ್ಳಬೇಕು. ಬ್ಯಾರಿ ಮುಖಂಡರು ದಾಳಿಯ ಬಗ್ಗೆ ಹೇಳಿಕೆ ಕೊಡಬೇಕಿತ್ತು. ಯಾಕೆ ಹೇಳಿಕೆ ನೀಡಿಲ್ಲ ಎಂದು ಅವರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಮಾತನಾಡಿ, ಈ ಬಗ್ಗೆ ಪ್ರತಿಕಾರ ಕೈಗೊಳ್ಳದಿದ್ದಲ್ಲಿ ಇತಿಹಾಸ ಎಂದಿಗೂ ನಮ್ಮನ್ನು ಕ್ಷಮಿಸುವುದಿಲ್ಲ. ಭಯೋತ್ಪಾದನೆಗೆ ಧರ್ಮವಿಲ್ಲ ಎಂದು ಹೇಳುತ್ತಾರೆ. ಆದರೆ ಮೊನ್ನೆ ಧರ್ಮವನ್ನು ಕೇಳಿ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ. ಇದರಿಂದ ಭಯೋತ್ಪಾಧನೆಗೆ ಧರ್ಮವಿದೆ ಎಂಬ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಹಿಂದೆ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಇಸ್ಲಾಂ ಧರ್ಮ ಇರುವ ತನಕ ಭಯೋತ್ಪಾಧನೆ ನಿಲ್ಲುವುದಿಲ್ಲ ಎಂದಿದ್ದರು. ಆದೀಗ ನಮ್ಮೆದುರು ಕಾಣುತ್ತಿದೆ. ಇತ್ತೀಚೆಗೆ ವಕ್ಫ್ ಕಾಯ್ದೆ ವಿರುದ್ದ ನಡೆದ ಪ್ರತಿಭಟನೆಯಲ್ಲಿ ಹಿಂದೂಗಳ ವಾಹನಗಳನ್ನು ಅಡ್ಡಗಟ್ಟಲಾಯಿತು. ಅಲ್ಲದೆ ಕಟೌಟ್‌ಗಳನ್ನು ತೆರವು ಮಾಡಲಾಗಿತ್ತು. ಆದರೆ ಇಂತಹ ಘಟನೆ ಮರುಕಳಿಸಿದಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದರು.
ಪ್ರತಿಭಟನಾಕಾರರು ದರ್ಬೆ ವೃತ್ತದಿಂದ ಗಾಂಧಿ ಕಟ್ಟೆಯ ತನಕ ದೊಂದಿ ಮೆರವಣಿಗೆಯೊಂದಿಗೆ ಕಾಲ್ನಡಿಗೆ ಜಾಥಾ ಮಾಡಿದರು. ಬಳಿಕ ಪ್ರತಿಭಟನಾ ಸಭೆ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ದಯಾನಂದ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಪ್ರಮುಖರಾದ ಅನಿಲ್ ತೆಂಕಿಲ, ದಾಮೋದರ ಪಾಟಾಳಿ, ಡಾ. ಸುರೇಶ್ ಪುತ್ತೂರಾಯ, ಯು. ಪೂವಪ್ಪ, ಪ್ರಸನ್ನ ಕುಮಾರ್ ಮಾರ್ತ ಮತ್ತಿತರರು ಇದ್ದರು.