ಸಾರಾಂಶ
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದುರಾದೃಷ್ಟಕರ, ಈ ದಾಳಿಯನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತಾ ದಾಳಿಯಲ್ಲಿ ಮಡಿದ ಕರ್ನಾಟಕದ ಇಬ್ಬರು ಸೇರಿ ಇತರ ಸಹೋದರರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದುರಾದೃಷ್ಟಕರ, ಈ ದಾಳಿಯನ್ನು ಬ್ಲಾಕ್ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತಾ ದಾಳಿಯಲ್ಲಿ ಮಡಿದ ಕರ್ನಾಟಕದ ಇಬ್ಬರು ಸೇರಿ ಇತರ ಸಹೋದರರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.ಉಗ್ರರ ದಮನಕ್ಕೆ ಕೇಂದ್ರ ಸರ್ಕಾರ ತಕ್ಷಣ ಕಾರ್ಯ ಪ್ರವೃತ್ತವಾಗಬೇಕು. ಸರ್ಕಾರ ತೆಗೆದುಕೊಳ್ಳುವ ಯಾವುದೇ ಕಾನೂನಾತ್ಮಕ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಆದರೆ, ಸರ್ಕಾರದ ವೈಫಲ್ಯ ಮರೆ ಮಾಚಲು ಸಾಧ್ಯವಿಲ್ಲ. ಗಡಿಯಲ್ಲಿ ಉಗ್ರರ ದಾಳಿ ತಡೆಯಲು ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ, ಇದು ಗೃಹ ಇಲಾಖೆಯ ಗಂಭೀರ ವೈಫಲ್ಯವನ್ನು ತೋರಿಸುತ್ತದೆ. 500 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಒಂದೇ ಕಡೆ ಸೇರಿದ್ದರೂ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಭದ್ರತಾ ಲೋಪವಲ್ಲದೆ ಬೇರೇನೂ ಅಲ್ಲ ಎಂದು ಅವರು ಅಭಿಪ್ರಾಪಟ್ಟಿದ್ದಾರೆ.ಇವರ ಆರ್ಭಟ, ಆಕ್ರೋಶಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಯಿತು ಎಂದೆನಿಸುತ್ತದೆ. ಬೇರೆ ಸರ್ಕಾರಗಳು ಆಡಳಿತ ನಡೆಸುವಾಗ ಉಗ್ರರ ದಾಳಿಗಳಾದಾಗ ರಾಜೀನಾಮೆ ಕೇಳುತ್ತಿದ್ದವರು ಈಗ ಮೌನವಾಗಿದ್ದಾರೆ ಎಂದರು.ಸುರಕ್ಷತಾ ಲೋಪಗಳಿಗೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಉತ್ತರಿಸಬೇಕು. ಪ್ರಧಾನಿಯವರ 56 ಇಂಚಿನ ಎದೆಯ ಶಕ್ತಿ ಏನೆಂಬುದು ದೇಶಕ್ಕೆ ತೋರಿಸುವ ಕಾಲ ಬಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.