ಪಹಲ್ಗಾಮನ ಭಯೋತ್ಪಾದಕ ಕೃತ್ಯ, ಕಠಿಣ ಕ್ರಮಕ್ಕೆ ಒತ್ತಾಯ

| Published : Apr 26 2025, 12:47 AM IST

ಸಾರಾಂಶ

ಕಾಶ್ಮೀರದಲ್ಲಿ ರಾಜ್ಯದ ಇಬ್ಬರು ಸೇರಿದಂತೆ 26ಕ್ಕೂ ಹೆಚ್ಚು ಅಮಾಯಕ ಪ್ರವಾಸಿಗರ ಹತ್ಯೆಗೈದಿರುವ ಘಟನೆ ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ಭಯೋತ್ಪಾದಕರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಗದಗ: ಕಾಶ್ಮೀರದಲ್ಲಿ ರಾಜ್ಯದ ಇಬ್ಬರು ಸೇರಿದಂತೆ 26ಕ್ಕೂ ಹೆಚ್ಚು ಅಮಾಯಕ ಪ್ರವಾಸಿಗರ ಹತ್ಯೆಗೈದಿರುವ ಘಟನೆ ಖಂಡನೀಯ. ಇಂತಹ ಅಮಾನವೀಯ ಕೃತ್ಯ ಎಸಗಿರುವ ಭಯೋತ್ಪಾದಕರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರ ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮೌಲಾನಾ ಶಬ್ಬೀರಅಹ್ಮದ ಬೋದ್ಲೇಖಾನ ಮಾತನಾಡಿ, ನಮ್ಮ ಭಾರತ ದೇಶದ ನಾಗರಿಕರು ಮತ್ತು ನಮ್ಮ ನಾಡಿನ ಜನರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಭಯೋತ್ಪಾದಕರು ಏಕಾಏಕಿಯಾಗಿ ಪ್ರವಾಸಿಗರ ಮೇಲೆ ಗುಂಡಿನ ದಾಳಿಯನ್ನು ನಡೆಸಿ ಇಬ್ಬರು ಕನ್ನಡಿಗರು ಸೇರಿದಂತೆ 26ಕ್ಕೂ ಹೆಚ್ಚು ಅಮಾಯಕರ ಹತ್ಯೆ ಮಾಡಿರುವುದನ್ನು ಗದಗ-ಬೆಟಗೇರಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಿಂದ ಹಾಗೂ ಮುಸ್ಲಿಂ ಸಮುದಾಯದಿಂದ ಈ ಘಟನೆಯನ್ನು ಖಂಡಿಸುತ್ತೇವೆ, ಅಮಾಯಕರ ಮೇಲೆ ದಾಳಿ ನಡೆಸಿರುವ ಯಾರೇ ಆಗಿರಲ್ಲಿ, ಯಾವುದೇ ಧರ್ಮದವರು ಆಗಿರಲಿ ನೀಚರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ನಮ್ಮದು ಶಾಂತಿಪ್ರಿಯ ದೇಶವಾಗಿದೆ. ಈ ರೀತಿ ಅಮಾಯಕರ ಮೇಲೆ ದಾಳಿ ನಡೆಸಿ ಅಶಾಂತಿಯನ್ನು ಹುಟ್ಟಿಸುವ ಕೆಲಸ ಮಾಡುತ್ತಿರುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು, ಮಾನವ ವಿರೋಧಿ ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರಿಗೆ ಯಾವುದೇ ಜಾತಿ, ಧರ್ಮಗಳು ಇರುವುದಿಲ್ಲ, ಇವರು ಕೇವಲ ಮಾನವ ವಿರೋಧಿ, ಸಮಾಜ ವಿರೋಧಿ, ಶಾಂತಿ ಸೌಹಾರ್ದತೆಯ ವಿರೋಧಿ, ಇಂತಹ ಘಟನೆಯನ್ನು ಭಾರತ ದೇಶದ ಪ್ರತಿಯೂಬ್ಬ ನಾಗರೀಕರು ವಿರೋಧಿಸಬೇಕು ಎಂದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಮಹ್ಮದಯುಸುಫ ನಮಾಜಿ ಮಾತನಾಡಿ, ಯಾವ ಧರ್ಮ, ಜಾತಿಗಳು ಆಗಿರಲಿ ಅಮಾಯಕರನ್ನು ಹತ್ಯೆಯನ್ನು ಸಹಿಸುವುದಿಲ್ಲ, ಈ ಘಟನೆಯಲ್ಲಿ ಜಾತಿ, ಧರ್ಮ ಮತ್ತು ರಾಜಕೀಯ ಮಾಡದೇ ಎಲ್ಲರೂ ನಮ್ಮ ಭಾರತ ದೇಶದ ಅಮಾಯಕರ ಮೇಲೆ ನಡೆದ ಹೇಯ ಕೃತ್ಯವನ್ನು ಖಂಡಿಸಬೇಕು. ಇದು ದೇಶದಲ್ಲಿನ ಕೋಟ್ಯಾಂತರ ನಿವಾಸಿಗಳ ಮನಸ್ಸಿನ ಮೇಲೆ ಮಾಡಿರುವ ದಾಳಿಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಬಾಬಾಜಾನ ಬಳಗಾನೂರ, ಕಾರ್ಯದರ್ಶಿ ಇಮ್ತಿಯಾಜ ಆರ್.ಮಾನ್ವಿ, ಉಮರಫಾರುಖ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಅಸ್ಫಾಕಅಲಿ ಹೊಸಳ್ಳಿ, ರಫೀಕ ಜಮಾಲಖಾನವರ, ಲಾಡಸಾಬ ಕಿತ್ತೂರ, ಸೈಯದಖಾಲೀದ ಕೊಪ್ಪಳ, ವಕೀಲ ಎಂ.ಬಿ. ನದಾಫ, ಮಹ್ಮದಹನೀಫ ಶಾಲಗಾರ, ಅಬ್ದುಲಮುನ್ನಾಫ ಮುಲ್ಲಾ, ಶಹಬಾಜ್ ಮುಲ್ಲಾ, ಶಾರುಖ ಹುಯಿಲಗೋಳ, ವಕೀಲ ಮುಸ್ತಾಕ ಧಾರವಾಡ, ಮುನ್ನಾ ಶೇಖ, ಶಬ್ಬೀರ ಹಮ್ಮಿಗಿ, ಜೂನಸಾಬ ಉಮಚಗಿ, ಶಬ್ಬೀರ ಗುಡಗುಂಟಿ, ಗೌಸ ಹುಯಿಲಗೋಳ, ಮೆಹಬೂಬಸಾಬ ಬಳ್ಳಾರಿ ಹಾಗೂ ನೂರಾರು ಪದಾಧಿಕಾರಿಗಳು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.