ಸಾರಾಂಶ
ಇದು ಉತ್ತರ ಕನ್ನಡದಿಂದ ಜಮ್ಮು ಕಾಶ್ಮೀರಕ್ಕೆ ಹೋದ 32 ಪ್ರವಾಸಿಗರು ಅನುಭವಿಸಿದ ಸಂಕಟ. ಕೇವಲ ಒಂದು ದಿನದಲ್ಲಿ ಇವರು ಭಾರಿ ಅಪಾಯದಿಂದ ಪಾರಾಗಿದ್ದಾರೆ.
ವಸಂತಕುಮಾರ್ ಕತಗಾಲ
ಕಾರವಾರ: ಜಮ್ಮು ಕಾಶ್ಮೀರದಲ್ಲಿ ವಿಹರಿಸಿ, ಆಟ ಆಡಿದ ಸ್ಥಳದಲ್ಲಿ ಭಯೋತ್ಪಾದಕ ದಾಳಿ ನಡೆದು ಕನ್ನಡಿಗರೂ ಸೇರಿದಂತೆ 26 ಜನರ ಹತ್ಯೆಯಾದ ಘಟನೆಯ ವರದಿ ಅಪ್ಪಳಿಸುತ್ತಿದ್ದಂತೆ ಒಮ್ಮೆಲೆ ಶಾಕ್...ಇದು ಉತ್ತರ ಕನ್ನಡದಿಂದ ಜಮ್ಮು ಕಾಶ್ಮೀರಕ್ಕೆ ಹೋದ 32 ಪ್ರವಾಸಿಗರು ಅನುಭವಿಸಿದ ಸಂಕಟ. ಕೇವಲ ಒಂದು ದಿನದಲ್ಲಿ ಇವರು ಭಾರಿ ಅಪಾಯದಿಂದ ಪಾರಾಗಿದ್ದಾರೆ.
ಶಿರಸಿಯ ಮಧುಕೇಶ್ವರ ಹೆಗಡೆ ಮಾಲೀಕತ್ವದ ಓಮಿ ಟ್ರಾವೆಲ್ಸ್ ಮೂಲಕ ಇವರು ಜಮ್ಮು ಹಾಗೂ ಕಾಶ್ಮೀರಕ್ಕೆ ಪ್ರವಾಸ ಹೋಗಿದ್ದರು. ಉಗ್ರರು ಹಿಂದೂಗಳೆಂದು ಪಕ್ಕಾ ಮಾಡಿಕೊಂಡು ಗುಂಡು ಹಾರಿಸಿ ಹತ್ಯೆಗೈದ ಪಹಲ್ಗಾಮ್‌ನಲ್ಲಿ ಭಾನುವಾರ ರಾತ್ರಿ ತಂಗಿದ್ದು ಸೋಮವಾರ ಮಧ್ಯಾಹ್ನದ ತನಕ ಅಲ್ಲೇ ಇದ್ದರು. ಎಲ್ಲರೂ ಹಿಂದೂಗಳಾಗಿದ್ದು, ಶಿರಸಿ, ಸಿದ್ಧಾಪುರ, ಸಾಗರ ಸುತ್ತಮುತ್ತಲಿನ ಊರಿನವರಾಗಿದ್ದರು. ಮಾರಣಹೋಮ ನಡೆದ ಬೈಸರನ್ ಹುಲ್ಲುಗಾವಲು ಪ್ರದೇಶಕ್ಕಿಂತ ಕೇವಲ ಒಂದು ಕಿ.ಮೀ. ದೂರದಲ್ಲಿ ಇವರು ವಿಹರಿಸಿ ಸಂಭ್ರಮಿಸಿದ್ದರು. ಸೋಮವಾರ ಸೋನಾಮಾರ್ಗದಲ್ಲಿ ತಂಗಿದ್ದು, ಅಲ್ಲಿಂದ ಶ್ರೀನಗರಕ್ಕೆ ಹೋಗುತ್ತಿರುವಾಗ ಉಗ್ರರ ದಾಳಿ ಬರಸಿಡಿಲಿನಂತೆ ಅಪ್ಪಳಿಸಿತು.ಏ.18ರಂದು ಒಂದು ತಂಡದಲ್ಲಿ ಶ್ರೀನಗರಕ್ಕೆ ಹೊರಟಿದ್ದರು. ಭಯೋತ್ಪಾದಕ ದಾಳಿಯಿಂದ ನಮ್ಮ ಪ್ರವಾಸಿಗರು ಆತಂಕಗೊಂಡಿದ್ದು ಹೌದು. ಆದರೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಗತ್ಯ ಭದ್ರತೆಯನ್ನೂ ಒದಗಿಸಲಾಗಿದೆ. ಶುಕ್ರವಾರ ಊರಿಗೆ ಮರಳಲಿದ್ದಾರೆ ಎಂದು ಓಮಿ ಟ್ರಾವೆಲ್ಸ್ ನ ಮಧುಕೇಶ್ವರ ಹೆಗಡೆ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.
ಈ ತಂಡಲ್ಲಿ 32 ಜನರಿದ್ದು, ಮಹಿಳೆಯರು, ಮಕ್ಕಳೂ ಇದ್ದರು. ದೂದ್ ಲೇಕ್, ಪಹಲ್ಗಾಮ್, ಮೋದಿ ಉದ್ಘಾಟಿಸಿದ ಸೋನಾಮಾರ್ಗ ಸುರಂಗ ಮತ್ತಿತರ ತಾಣಗಳನ್ನು ವೀಕ್ಷಿಸಿ ಸಂಭ್ರಮಿಸಿದ್ದರು. ಗುಲ್ಮಾರ್ಗಗೆ ಹೋಗಬೇಕೆನ್ನುವಷ್ಟರಲ್ಲಿ ಉಗ್ರರ ದಾಳಿ ನಡೆದಿದೆ. ಇಡೀ ಜಮ್ಮು-ಕಾಶ್ಮೀರ ಸ್ತಬ್ಧಗೊಂಡಿದೆ. ಪ್ರವಾಸಿಗರು ಎಲ್ಲೂ ಸಂಚರಿಸುವಂತಿಲ್ಲ. ಅಷ್ಟು ಬಿಗಿಯಾದ ಭದ್ರತೆ ಏರ್ಪಡಿಸಲಾಗಿದೆ. ಗುರುವಾರ ವಿಮಾನ ಲಭ್ಯತೆ ಇಲ್ಲದೇ ಇರುವುದರಿಂದ ಶುಕ್ರವಾರ ಊರಿಗೆ ಮರಳುತ್ತೇವೆ ಎಂದು ಈ ತಂಡದಲ್ಲಿದ್ದ ಪ್ರವಾಸಿಗರು ''''ಕನ್ನಡಪ್ರಭ''''ಕ್ಕೆ ವಿವರಿಸಿದರು.ಮಂಗಳವಾರ ಜಮ್ಮುವಿನಲ್ಲಿ ಭೂಕುಸಿತದಿಂದ ಬ್ಲಾಕ್ ಆದ ರಸ್ತೆ ತೆರವಿಗೆ ಸೈನಿಕರು ತೆರಳಿದ್ದರು. ಆ ಅವಕಾಶವನ್ನು ಉಪಯೋಗಿಸಿಕೊಂಡು ಉಗ್ರ ದಾಳಿ ನಡೆದಿದೆ. ಈ ದಾಳಿ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ನಾವು ಆಘಾತಗೊಂಡೆವು. ಆದರೆ ನಾವು ಸುರಕ್ಷಿತವಾಗಿದ್ದೇವೆ ಎನ್ನುತ್ತಾರೆ ನ್ಯಾಯವಾದಿ, ಶಿರಸಿಯಿಂದ ಕಾಶ್ಮೀರಕ್ಕೆ ತೆರಳಿದ ಪ್ರವಾಸಿ ಆರ್.ಜಿ. ನಾಯ್ಕ.
ಆರ್ಟಿಕಲ್ 370 ರದ್ದತಿಯಿಂದ ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿ ಚಟುವಟಿಕೆ ಆರಂಭಗೊಂಡು ಹೇರಳ ಆದಾಯ ಬರುತ್ತಿದೆ. ನಮಗೆ ಖುಷಿಯಾಗಿದೆ ಎಂದು ಸ್ಥಳೀಯ ವ್ಯಾಪಾರ-ವಹಿವಾಟುದಾರರು ಸಂತಸ ವ್ಯಕ್ತಪಡಿಸಿದ್ದರು. ಆದರೆ ಈ ಘಟನೆಯಿಂದ ಅಲ್ಲಿನ ಪ್ರವಾಸೋದ್ಯಮದ ಮೇಲೆ ಮತ್ತೆ ಕರಿನೆರಳು ಬಿದ್ದಂತಾಗಿದೆ ಎಂದು ಪ್ರವಾಸಿಗರು ಅಭಿಪ್ರಾಯಪಟ್ಟಿದ್ದಾರೆ.