ಪಹಲ್ಗಾಂ: ಚರ್ಚೆಗೆ ಅವಕಾಶ ನೀಡಿದ್ದೇ ಧನಕರ್‌ ರಾಜೀನಾಮೆ ಕಾರಣನಾ?: ಸಲೀಂ

| Published : Jul 24 2025, 01:45 AM IST

ಸಾರಾಂಶ

ಸಣ್ಣ ವ್ಯಾಪಾರಿಗಳ ಜಿಎಸ್‌ಟಿ ನೋಟಿಸ್ ಕುರಿತಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ ಮಾಡಿದ್ದಾರೆ. ಆದರೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಹದಾಯಿ ವಿಚಾರದಲ್ಲಿ ಅವರು ಏಕೆ ಮಾತನಾಡುತ್ತಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನ ಬರುತ್ತಿಲ್ಲ. ಜಿಎಸ್‌ಟಿ ಕೇಂದ್ರದ ವ್ಯಾಪ್ತಿಗೆ ಬರಲಿದ್ದು, ಸಚಿವ ಜೋಶಿ ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ.

ಹುಬ್ಬಳ್ಳಿ: ರಾಜ್ಯಸಭೆಯಲ್ಲಿ ಪಹಲ್ಗಾಮ್ ಘಟನೆ ಸೇರಿದಂತೆ ವಿವಿಧ ವಿಷಯಗಳ ಚರ್ಚೆಗೆ ಅವಕಾಶ ನೀಡಿದ ಕಾರಣ ಬಹುಶಃ ಉಪರಾಷ್ಟ್ರಪತಿಯಾಗಿದ್ದ ಜಗದೀಪ ಧನಕರ್ ಅವರಿಂದ ಬಿಜೆಪಿ ರಾಜೀನಾಮೆ ಪಡೆದಿರಬಹುದು ಎಂದು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಂಚೇತಕ ಸಲೀಂ ಅಹ್ಮದ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯಸಭೆಯಲ್ಲಿ ಪಹಲ್ಗಾಮ್ ದಾಳಿ, ನ್ಯಾ. ವರ್ಮಾ ಅವರ ಮನೆಯ ಮೇಲೆ ಹಣ ಸಿಕ್ಕಿದ್ದು ಹಾಗೂ ಜಾರಿ ನಿರ್ದೇಶನಾಲಯ(ಇಡಿ) ದುರ್ಬಳಕೆ ಕುರಿತು ಚರ್ಚಿಸಲು ಅವಕಾಶ ಕೇಳಿದ್ದರು. ಇದಕ್ಕೆ ಸ್ಪಂದಿಸಿದ ಜಗದೀಪ ಧನಕರ್ ಅನುಮತಿ ನೀಡಿದ್ದರು ಎಂದರು.

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಬಳಸಿಕೊಂಡು ಪ್ರತಿಪಕ್ಷದ ನಾಯಕರ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಯಾವುದೇ ಸರ್ಕಾರವಿದ್ದರೂ ಅಧಿಕಾರ ದುರುಪಯೋಗ ಸರಿಯಲ್ಲ. ಸಣ್ಣ ವ್ಯಾಪಾರಿಗಳ ಜಿಎಸ್‌ಟಿ ನೋಟಿಸ್ ಕುರಿತಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆ ಮಾಡಿದ್ದಾರೆ. ಆದರೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಮಹದಾಯಿ ವಿಚಾರದಲ್ಲಿ ಅವರು ಏಕೆ ಮಾತನಾಡುತ್ತಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನ ಬರುತ್ತಿಲ್ಲ. ಜಿಎಸ್‌ಟಿ ಕೇಂದ್ರದ ವ್ಯಾಪ್ತಿಗೆ ಬರಲಿದ್ದು, ಸಚಿವ ಜೋಶಿ ಜನರ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಆರೆಸ್ಸೆಸ್‌ನವರಿಗೆ ಪ್ರಧಾನಿ ಮೋದಿ ಬೇಡವಾಗಿದ್ದಾರೆ. ಅದಕ್ಕಾಗಿಯೇ 75 ವಯಸ್ಸಿನ ನಂತರ ರಾಜಕೀಯ ನಿವೃತ್ತಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ ಎಂದ ಸಲೀಂ ಅಹ್ಮದ, ಮೋದಿಯವರು ಅಧಿಕಾರದಿಂದ ಇಳಿಯುವ ದಿನ ದೂರವಿಲ್ಲ ಎಂದೆನಿಸುತ್ತದೆ ಎಂದು ಹೇಳಿದರು.