ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ತಾಲೂಕು ಕಂದಾಯ ಇಲಾಖೆ ವತಿಯಿಂದ ರೈತರಿಗೆ ಉಪಯೋಗ ಆಗುವಂತೆ ಪಹಣಿ, ಪೋಡಿ ದುರಸ್ತಿ ಮತ್ತು ಕಂದಾಯ ನಿಗದಿ ಕಾರ್ಯಕ್ರಮ ಶುಕ್ರವಾರದಿಂದ ಹಮ್ಮಿಕೊಳ್ಳಲಾಗಿದೆ ಎಂದು ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.ಕುಶಾಲನಗರದ ತಾಲೂಕು ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇತ್ತೀಚೆಗೆ ಕೊಡಗು ಜಿಲ್ಲೆಗೆ ಆಗಮಿಸಿದ ಕಂದಾಯ ಸಚಿವರ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಸಲಹೆಯಂತೆ ಹಲವೆಡೆ ರೈತರಿಗೆ ಹಕ್ಕು ವರ್ಗಾವಣೆ, ಬ್ಯಾಂಕ್ ಸಾಲ, ಭೂ ಪರಿವರ್ತನೆ, ಬೆಳೆ ಪರಿಹಾರ ಮುಂತಾದ ಸರ್ಕಾರದ ಯೋಜನೆ ಸದುಪಯೋಗ ಪಡೆಯಲು ತೊಂದರೆ ಉಂಟಾಗುತ್ತಿದೆ. ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂಬಂಧ ಅಂತಹ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.ಕುಶಾಲನಗರ ತಾಲೂಕಿನ ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿ ಗ್ರಾಮದಲ್ಲಿ ಶುಕ್ರವಾರದಿಂದ ಗ್ರಾಮಸ್ಥರ ಸಮಕ್ಷಮದಲ್ಲಿ ಈವರೆಗೂ ದುರಸ್ತಿ ಆಗದ ಜಮೀನಿನ ಪೋಡಿ ದುರಸ್ತಿ ಕಾರ್ಯ ಮತ್ತು ಕಂದಾಯಕ್ಕೆ ಬಾರದ ಬಾಣೆ ಜಮೀನಿಗೆ ಕಂದಾಯ ನಿಗದಿಪಡಿಸುವ ಆಂದೋಲನ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಂದಾಯ ನಿಗದಿ:ಅಭಿಯಾನದಲ್ಲಿ ಜಾಗ ಸರ್ವೇ ಕಾರ್ಯ ನಡೆಸಿ ಕಂದಾಯ ನಿಗದಿಪಡಿಸಲಾಗುವುದು. ಹಿಡುವಳಿದಾರರ ಸರ್ವೇ ನಂಬರ್ ಸಮಸ್ಯೆಗೂ ಇದೇ ಸಂದರ್ಭದಲ್ಲಿ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.
ಈ ಕಾರ್ಯವನ್ನು ನಿರಂತರವಾಗಿ ಸಮಸ್ಯೆಯಿರುವ ಗ್ರಾಮಗಳಲ್ಲಿ ನಡೆಸಲಾಗುತ್ತದೆ ಎಂದು ಅವರು ಹೇಳಿದರು.ಬಗರ್ ಹುಕುಂನಲ್ಲಿ ಮಂಜೂರು ಆಗಿರುವ ನಿವೇಶನಗಳಿಗೂ ಸರಿಯಾದ ದಾಖಲೆ ಮಾಡುವ ಉದ್ದೇಶವಿದೆ. ಗ್ರಾಮದ ರೈತರು ಖಾತೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತಂದು ಆಂದೋಲನ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.