ಸಾರಾಂಶ
ಕಾರವಾರ: ನಗರದಲ್ಲಿ ಪಹರೆ ವೇದಿಕೆ ಸಂಘಟನೆಯ ಮೂಲಕ ನಿರಂತರವಾಗಿ ಕಳೆದ ಹತ್ತು ವರ್ಷದಿಂದ ಸ್ವಚ್ಛತೆ ಮಾಡಿಕೊಂಡು ಬಂದಿದೆ. ಇದು ಇತರರಿಗೆ ಮಾದರಿಯಾಗಿದೆ ಎಂದು ನಗರಸಭೆಯ ಪೌರಾಯುಕ್ತ ಜಗದೀಶ ಹುಲಗೆಜ್ಜಿ ತಿಳಿಸಿದರು.ನಗರದ ಜಿಪಂ ಬಳಿ ನಡೆದ 519ನೇ ವಾರದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿ, ತಾವು ಕೆಲಸ ನಿರ್ವಹಿಸುತ್ತಿರುವ ಐದನೇ ಜಿಲ್ಲೆ ಇದಾಗಿದೆ. ಬೇರೆ ಕಡೆ ಸಹ ಸ್ವಚ್ಛತೆ ಮಾಡುವ ತಂಡವನ್ನು ನೋಡಿದ್ದೇನೆ. ಆದರೆ ಅಲ್ಲಿ ಸ್ವಚ್ಛತೆ ಎಂದು ಹೇಳಿ ಪೌರಕಾರ್ಮಿಕ ಕೈನಲ್ಲಿ ಕೆಲಸ ಮಾಡುವುದನ್ನು ಗಮನಿಸಿದ್ದೇನೆ. ಆದರೆ ಪಹರೆ ಸಂಘಟನೆಯವರು ಎಲ್ಲರೂ ಸೇರಿ ತಾವೇ ಕೆಲಸ ಮಾಡಿ ನಗರವನ್ನು ಸ್ವಚ್ಛತೆ ಮಾಡುತ್ತಿದ್ದಾರೆ. ಎಲ್ಲೂ ಪ್ರಚಾರ ಬಯಸದೇ ನಗರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಸಂಘಟನೆಯ ಕೆಲಸ ಇತರರಿಗೆ ಮಾದರಿಯಾಗಲಿದೆ. ಈ ಕೆಲಸದಲ್ಲಿ ತಾವು ಕಾರವಾರದಲ್ಲಿ ಪೌರಾಯುಕ್ತನಾಗಿ ಇರುವ ವೇಳೆ ಸದಾ ಕಾಲ ಪಾಲ್ಗೊಳ್ಳುತ್ತೇನೆ ಎಂದರು.
ಸಂಘಟನೆ ವತಿಯಿಂದ ಪ್ರತಿವಾರ ಉತ್ತಮ ದುಡಿಮೆಗಾರ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಹಾಲಕ್ಷ್ಮಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಅಲ್ಲದೇ ಸಂಘಟನೆಯ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸದಸ್ಯ ಜಾರ್ಜ್ ಫರ್ನಾಂಡಿಸ್ ಅವರನ್ನು ಅಭಿನಂದಿಸಲಾಯಿತು.ಸಂಘಟನೆಯ ಅಧ್ಯಕ್ಷ ನಾಗರಾಜ ನಾಯಕ, ಕಾರ್ಯದರ್ಶಿ ಟಿ.ಬಿ. ಹರಿಕಾಂತ್, ಎಲ್.ಎಸ್. ಫರ್ನಾಂಡಿಸ್, ಧಾರವಾಡ ವಿವಿ ಸಿಂಡಿಕೇಟ್ ಸದಸ್ಯ ಡಾ. ಶಿವಾನಂದ ನಾಯಕ, ಸದಾನಂದ ಮಾಂಜ್ರೇಕರ್, ಸುಜಾತ ಥಾಮ್ಸೆ, ಅಜಯ್ ಸಾಹುಕರ್, ರಾಜೇಶ್ ಮರಾಠೆ ಹಲವರು ಇದ್ದರು.ಗೌರವಾಧ್ಯಕ್ಷರಾಗಿ ಜಾರ್ಜ್ ಫರ್ನಾಂಡಿಸ್
ಪಹರೆ ವೇದಿಕೆಯ ಗೌರವಾಧ್ಯಕ್ಷರಾಗಿ ಸೇಂಟ್ ಮಿಲಾಗ್ರೆಸ್ ಸೌಹಾರ್ದ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ನಡೆದ ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಯ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಜಾರ್ಜ್ ಫರ್ನಾಂಡಿಸ್ ಅವರನ್ನು ಆಯ್ಕೆ ಮಾಡಲಾಯಿತು. ಪಹರೆ 10ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ನಡೆಯಲಿರುವ ಕಾರ್ಯಕ್ರಮಗಳಿಗೆ ಜಾರ್ಜ್ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಿರಿಯ ಸದಸ್ಯರಾದ ಅಜಯ ಸಾವಕಾರ, ಕೆ.ಡಿ. ಪೆಡ್ನೇಕರ್, ಮನೋಜ್, ಟಿ.ಬಿ. ಹರಿಕಾಂತ, ಪ್ರಕಾಶ ಕೌರ್, ಎಲ್.ಎಸ್. ಫರ್ನಾಂಡಿಸ್, ಖೈರುನ್ನೀಸಾ ಶೇಖ ಮತ್ತಿತರರು ಇದ್ದರು.