ಸಾರಾಂಶ
ಲಲಿತ ಕಲೆ, ಸಂಸ್ಕೃತಿಗೆ ಪ್ರೋತ್ಸಾಹದ ಕೊರತೆ ಇದ್ದು, ಅದು ನೀಗಬೇಕಿದೆ. ಸಂಗೀತ ಕಲೆಯಲು ಅವಕಾಶ ಇರುವಂತೆ ಚಿತ್ರಕಲೆಯ ಕಲಿಕೆಗೂ ಅವಕಾಶ ಇರಬೇಕು. ಕಲಾ ಕ್ಷೇತ್ರ ಬೆಳೆಯಬೇಕೆಂದರೆ ಎಲ್ಲರೂ ಹಿರಿಯ ಕಲಾವಿದರು ಸೇರಿ ಆಲೋಚಿಸಬೇಕು.
ಧಾರವಾಡ:
ಧಾರವಾಡ ನೆಲವು ಹಲವು ಕಾಣಿಕೆಗಳನ್ನು ನೀಡಿದ ನಗರವಾಗಿದ್ದು ಅದರಲ್ಲೂ ಚಿತ್ರಕಲೆಯಲ್ಲಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಂಘವು ನೂತನವಾಗಿ ನಿರ್ಮಿಸಿರುವ `ಚಿತ್ರಕಲಾ ಗ್ಯಾಲರಿ’ ಉದ್ಘಾಟಿಸಿದ ಅವರು, ಸಾಂಪ್ರದಾಯಕ ಚಿತ್ರಕಲೆಯೇ ನಮ್ಮ ಮೂಲ ಕಲೆ. ಅದಕ್ಕೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಈ ಕುರಿತಂತೆ ಸರಿಯಾದ ಸ್ಥಾನಮಾನ ನೀಡುವ ಕಾರ್ಯವನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿ ಒಂದು ಯೋಜನೆಯಾಗಿ ಕೈಗೆತ್ತಿಕೊಳ್ಳುತ್ತಿದೆ. ಸಾಂಪ್ರದಾಯಕ ಕಲೆಗಳ ಪ್ರದರ್ಶನ, ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲು ಯೋಜಿಸಿದೆ. ಈ ಯೋಜನೆಗೆ ಕೈಜೋಡಿಸಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಎಂದರು.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಹಿರಿಯ ಕಲಾವಿದ ಎಂ.ಆರ್. ಬಾಳಿಕಾಯಿ, ಕಲಾ ಗ್ಯಾಲರಿ ಸಮಾಜದ ಆಗು-ಹೋಗುಗಳನ್ನು ಚಿತ್ರ ಪ್ರದರ್ಶನಗಳ ಮೂಲಕ ಎತ್ತಿ ಹಿಡಿಯುತ್ತದೆ. ಹಿರಿಯರನ್ನು ನೆನಸಿಕೊಂಡಾಗ ಮಾತ್ರ ಒಬ್ಬ ಶ್ರೇಷ್ಠ ಕಲಾವಿದನಾಗಿ ರೂಪಗೊಳ್ಳಲು ಸಾಧ್ಯ ಎಂದು ಹೇಳಿದರು.ಗದಗ ವಿಜಯ ಕಲಾ ಕಾಲೇಜಿನ ಸಂಸ್ಥಾಪಕ ಅಶೋಕ ಅಕ್ಕಿ ಮಾತನಾಡಿ, ಲಲಿತ ಕಲೆ, ಸಂಸ್ಕೃತಿಗೆ ಪ್ರೋತ್ಸಾಹದ ಕೊರತೆ ಇದ್ದು, ಅದು ನೀಗಬೇಕಿದೆ. ಸಂಗೀತ ಕಲೆಯಲು ಅವಕಾಶ ಇರುವಂತೆ ಚಿತ್ರಕಲೆಯ ಕಲಿಕೆಗೂ ಅವಕಾಶ ಇರಬೇಕು. ಕಲಾ ಕ್ಷೇತ್ರ ಬೆಳೆಯಬೇಕೆಂದರೆ ಎಲ್ಲರೂ ಹಿರಿಯ ಕಲಾವಿದರು ಸೇರಿ ಆಲೋಚಿಸಬೇಕು ಎಂದರು.
ಕಲಾವಿದ ಬಿ. ಮಾರುತಿ, ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಎಫ್.ವಿ. ಚಿಕ್ಕಮಠ, ಪ್ರೊ. ಬಸವರಾಜ ಕುರಿ, ಶಂಕರ ಹಲಗತ್ತಿ ಇದ್ದರು. ಸಂಗೀತ ವಿದ್ಯಾರ್ಥಿನಿ ಖುಷಿ ಢವಳಿ ಸಂಗೀತ ನಡೆಸಿಕೊಟ್ಟರು. ಅವರಿಗೆ ಅನಿಲ ಮೇತ್ರಿ ತಬಲಾ ಹಾಗೂ ಬಸವರಾಜ ಹೂಗಾರ ಹಾರ್ಮೋನಿಯಂ ಸಾಥ್ ನೀಡಿದರು.