ಚಿತ್ರಕಲೆ ಸಂಸ್ಕೃತಿಕ ಪ್ರತೀಕ

| Published : May 21 2024, 12:39 AM IST

ಸಾರಾಂಶ

ಚಿತ್ರಕಲಾವಿದರ ಚಿತ್ರಪ್ರದರ್ಶನಕ್ಕೆ ಸಿಗಬೇಕಾದಷ್ಟು ಮುಕ್ತ ಅವಕಾಶಗಳು ಸಿಗದೇ ಇರುವುದರಿಂದ ಚಿತ್ರಕಲೆ ನೇಪಥ್ಯಕ್ಕೆ ಸರಿದಂತಿದೆ.

ಧಾರವಾಡ;

ಚಿತ್ರಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಅದು ಸರ್ವಕಾಲಕ್ಕೂ ಸಲ್ಲುವ ಕಲೆಯಾಗಿದೆ ಎಂದು ಹಿರಿಯ ಚಿತ್ರಕಲಾವಿದ ಡಿ.ಎಂ. ಬಡಿಗೇರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಚಿತ್ರಕಲಾವಿದ ಮಹಾದೇವ ಜಗತಾಪ ಅವರ ಮೂರು ದಿನಗಳ ‘ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಉದ್ಘಾಟಿಸಿ ಮಾತನಾಡಿದರು.

ಜಗತಾಪ ಓರ್ವ ಶ್ರೇಷ್ಠ ಬಹುಮುಖ ಕಲಾವಿದರು. ಅವರು ರಚಿಸಿದ ವೈವಿಧ್ಯಮಯ ಚಿತ್ರಗಳು ನಾಡಿನಾದ್ಯಂತ ಪ್ರದರ್ಶನಗೊಂಡಿದ್ದು, ಭವಿಷ್ಯದಲ್ಲಿ ಬೃಹತ್ ನಗರಗಳಲ್ಲಿಯೂ ಪ್ರದರ್ಶನ ಆಗುವಂತಾಗಬೇಕು. ಸಂಘ ಲಲಿತಕಲೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಮಹಾದೇವ ಜಗತಾಪ ಮಾತನಾಡಿ, ನಾನೊಬ್ಬ ಚಿತ್ರಕಲಾವಿದನಾಗಿ ರೂಪಗೊಳ್ಳಲು ಅನೇಕ ರಸಋಷಿಗಳ, ಕವಿಗಳ ಪ್ರಭಾವವಿದೆ. ನನ್ನ ಸಾಧನೆಗೆ ಅನೇಕ ಸಂಘ-ಸಂಸ್ಥೆಗಳು ನೀಡಿದ ಪ್ರೋತ್ಸಾಹ ಅನನ್ಯವಾದದ್ದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಜೀವನ ಪ್ರೀತಿಗಾಗಿ ಕಲೆ ಅತ್ಯಗತ್ಯವಾಗಿದೆ. ಚಿತ್ರಕಲೆ ಲಲಿತ ಕಲೆಗಳ ಒಂದು ಅವಿಭಾಜ್ಯ ಅಂಗ. ಆದಿಮಾನವನು ತಾನು ವಾಸಿಸುತ್ತಿದ್ದ ಗುಹೆಗಳಲ್ಲಿ ವಿಶ್ರಾಂತಿ ಸಿಕ್ಕಾಗ ಗೋಡೆಗಳ ಮೇಲೆ ಬೇಟೆಯಾಡುವ ಚಿತ್ರಗಳನ್ನು ಬಿಡಿಸಿದ್ದು ಇದು ಜಗತ್ತಿನ ಮೊಟ್ಟಮೊದಲ ಕಲೆಯಾಗಿದೆ ಎಂದರು.

ಬಾಲ್ಯದಿಂದಲೇ ಮಕ್ಕಳಿಗೆ ಚಿತ್ರಬಿಡಿಸುವ ಹವ್ಯಾಸ ಅಗತ್ಯವಾಗಿದೆ. ಚಿತ್ರಕಲೆ ಮಕ್ಕಳ ಮನಸ್ಸನ್ನು ಅರಳಿಸಿ ಭಾವನೆಗಳನ್ನು ತಟ್ಟುವಂತಿರಬೇಕು. ಅಂದಾಗ ಮಾತ್ರ ಚಿತ್ರಕಲೆ ಮಕ್ಕಳ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗಲು ಸಾಧ್ಯ. ಇಂದು ಚಿತ್ರಕಲಾವಿದರ ಚಿತ್ರಪ್ರದರ್ಶನಕ್ಕೆ ಸಿಗಬೇಕಾದಷ್ಟು ಮುಕ್ತ ಅವಕಾಶಗಳು ಸಿಗದೇ ಇರುವುದರಿಂದ ಚಿತ್ರಕಲೆ ನೇಪಥ್ಯಕ್ಕೆ ಸರಿದಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಬಸವಪ್ರಭು ಹೊಸಕೇರಿ, ಡಾ. ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಮಹಾಂತೇಶ ನರೇಗಲ್, ಎಂ.ಟಿ. ದಳವಾಯಿ, ದೇಸಾಯಿಗೌಡ ಪಾಟೀಲ, ಎಂ.ಬಿ. ಹೆಗ್ಗಾರ ಇದ್ದರು.