ಚಿತ್ರಕಲೆ ದೇವರು ನೀಡಿದ ದಿವ್ಯ ಶಕ್ತಿ: ಶಾಸಕ ಜಗದೀಶ ಗುಡಗುಂಟಿ

| Published : Nov 23 2025, 03:30 AM IST

ಚಿತ್ರಕಲೆ ದೇವರು ನೀಡಿದ ದಿವ್ಯ ಶಕ್ತಿ: ಶಾಸಕ ಜಗದೀಶ ಗುಡಗುಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಮಖಂಡಿ ನಗರದ ತುಂಗಳ ಶಾಲೆಯ ಸಭಾಭವನದಲ್ಲಿ ಶನಿವಾರ ಕನ್ನಡಪ್ರಭ ದಿನಪತ್ರಿಕೆ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಶಾಸಕ ಜಗದೀಶ ಗುಡಗುಂಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಚಿತ್ರಕಲೆ ದೇವರು ನೀಡಿರುವ ದಿವ್ಯ ಶಕ್ತಿಯಾಗಿದೆ. ಚಿತ್ರ ಕಲಾವಿದರು ಬ್ರಹ್ಮರಿದ್ದಂತೆ. ಮನುಷ್ಯನ ಊಹೆಗೆ ನಿಲುಕದ್ದನ್ನು ಕಲ್ಪಿಸಿಕೊಂಡು ಅದಕ್ಕೆ ಸ್ವರೂಪ ನೀಡಿ ಕಲಾಕೃತಿಯಾಗಿ ಬೆಳಕಿಗೆ ತರುವ ಶಕ್ತಿ ಚಿತ್ರಕಲಾವಿದರಿಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.ನಗರದ ತುಂಗಳ ಶಾಲೆಯ ಸಭಾಭವನದಲ್ಲಿ ಶನಿವಾರ ಕನ್ನಡಪ್ರಭ ದಿನಪತ್ರಿಕೆ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಚಿತ್ರಕಲೆಯು ಆಧುನಿಕ ಯುಗದಲ್ಲಿ ಫೋಟೋಗ್ರಾಫಿಯಲ್ಲಿ ಅಡಗಿದೆ. ಆದರೆ ಕೈ ಬರಹದ ಚಿತ್ರಗಳಿಗೆ ಆಧುನಿಕ ಯುಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಚಿತ್ರಕಲೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನ್ನಡಪ್ರಭ ದಿನಪತ್ರಿಕೆಯವರು ಆಯೋಜಿಸಿರುವ ಸ್ವರ್ಧೆ ವಿದ್ಯಾರ್ಥಿಗಳಲ್ಲಿ ಉತ್ಸಾಹ ಮೂಡಿಸಿದೆ. ದೂರದೃಷ್ಟಿ, ಸಮರ್ಪಕವಾದ ಆಯಾಮ, ಎಡಬಲ ಎಲ್ಲವನ್ನೂ ಯೋಚಿಸಿ ಚಿತ್ರ ಬಿಡಿಸಬೇಕಾಗುತ್ತದೆ. ಅದರಿಂದ ಏಕಾಗ್ರತೆ ಹೆಚ್ಚುತ್ತದೆ. ವಿದ್ಯಾಭ್ಯಾಸಕ್ಕೂ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿರುವು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಸಮಾಜಕ್ಕೆ ಅವಶ್ಯವಿರುವ ಕಲಾವಿದರನ್ನು ಪರಿಚಯಿಸಿದಂತಾಗುತ್ತದೆ. ಸ್ಫರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಹೊಂದಿರಬೇಕು. ಸೋಲು-ಗೆಲುವು ಮುಖ್ಯವಲ್ಲ ಎಂದು ತಿಳಿಸಿದರು.

ತಹಸೀಲ್ದಾರ ಅನೀಲ ಬಡಿಗೇರ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಜಿಲ್ಲಾ ಶಿಕ್ಷಕರ ಸಂಘದ ಆಧ್ಯಕ್ಷ ಬಸವರಾಜ ಬಾಗೆನ್ನವರ, ಶಿಕ್ಷಕ ಪುಂಡಲೀಕ ಅಜನಕ್ಕಿ, ತುಂಗಳ ಶಾಲೆಯ ಮುಖ್ಯಶಿಕ್ಷಕ ಡಿ.ಜಿ.ವಾಲಿ ಹಾಗೂ ಶ್ರೀನಿವಾಸ ಹುಬ್ಬಳ್ಳಿ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ನರಸಿಂಹ ಕಲ್ಲೊಳಿ, ಮುಖಂಡರಾದ ರುದ್ರಯ್ಯ ಕರಡಿ. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಕುಮಾರ ಆಲಗೂರ, ಅರಣ್ಯ ಇಲಾಖೆಯ ಮೇತ್ರಿ, ಗಿರಿಮಲ್ಲಪ್ಪ ಕಡಪಟ್ಟಿ, ಶ್ರೀಧರ ಕಂಬಿ. ಸತೀಶ ಕಡಪಟ್ಟಿ ಇತರರು ವೇದಿಕಯಲ್ಲಿದ್ದರು.

ಚಿತ್ರಕಲಾ ಸ್ಪರ್ಧೆಯ ನಿರ್ಣಾಯಕರಾಗಿ ಮಹೇಶ ಚಿತ್ರಕಲಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ವಿ ಹಂಪಣ್ಣವರ, ಉಪನ್ಯಾಸಕರಾದ ಎಚ್‌.ಎಂ. ವಿಶ್ವನಾಥ, ಕೆ.ಬಿ. ರಾಥೋಡ ಕಾರ್ಯನಿರ್ವಹಿಸಿದರು. ಹಣಮಂತ ಭೂಷಣ್ಣವರ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ ಹೊಳೆಪ್ಪಗೋಳ, ಲಿಂಗರಾಜ ಬೆಳ್ಳೆನ್ನವರ, ವಿಷ್ಣು ಕುಲಕರ್ಣಿ ಉಸ್ತುವಾರಿ ವಹಿಸಿದ್ದರು. ವಿವಿಧ ಶಾಲೆಗಳ 75ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೇಶವ ಕುಲಕರ್ಣಿ ವಂದಿಸಿದರು.----ಬಾಕ್ಸ್

ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳು:

8ನೇ ತರಗತಿಯಲ್ಲಿ ತುಂಗಳ ಶಾಲೆಯ ಸಾಕ್ಷಿ ಹಂಚಿನಾಳ ಪ್ರಥಮ, ಬಿಎಲ್‌ಡಿಇ ಶಾಲೆಯ ಪ್ರದ್ಯೋತ ಗಣಾಚಾರಿ ದ್ವಿತಿಯ ಹಾಗೂ ಬಿಎಲ್‌ಡಿಇ ಶಾಲೆಯ ಸಂಕೇತ ಚಿನಗುಂಡಿ ತೃತೀಯ ಸ್ಥಾನ. 9ನೇ ತರಗತಿಯಲ್ಲಿ ಕುಂಚನೂರು ಸರ್ಕಾರಿ ಪ್ರೌಢಶಾಲೆಯ ಮಾರುತಿ ಗುಡದಾರ ಪ್ರಥಮ, ತುಂಗಳ ಶಾಲೆಯ ನಿಹಾರಿಕಾ ಬೀಳಗಿ ದ್ವಿತೀಯ ಹಾಗೂ ಆದರ್ಶ ವಿದ್ಯಾಲಯದ ಅನೀಲ ಚಿಂಚಖಂಡಿ ತೃತೀಯ ಬಹುಮಾನ ಪಡೆದರು. 10ನೇ ತರಗತಿಯಲ್ಲಿ ತುಂಗಳ ಶಾಲೆ ಹುಲ್ಯಾಳದ ಬಸವರಾಜ ಚಿಂಚಕಂಡಿ ಪ್ರಥಮ. ನಿಖಿತಾ ಆಲಗೂರು ದ್ವಿತಿಯ, ಶ್ರೇಯಾ ಕುಮಟಗಿ ತೃತೀಯ ಸ್ಥಾನ ಪಡೆದರು.