ಹೊನ್ನಾಳಿಯಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಜೋಡಿ ರಥೋತ್ಸವ

| Published : May 02 2025, 12:12 AM IST

ಸಾರಾಂಶ

ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಜೋಡಿ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಉತ್ಸವ ಮೂರ್ತಿಗಳ ಮೆರವಣಿಗೆ । ಅನ್ನ ನೈವೇದ್ಯ

ಹೊನ್ನಾಳಿ: ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಜೋಡಿ ರಥೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಗುರುವಾರ ಬೆಳಗ್ಗೆ ಶ್ರೀ ಜೋಡಿ ಬಸವಣ್ಣನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಡೆಸಿದ ನಂತರ ಜೋಡಿ ಬಸವೇಶ್ವರ ದೇವರು, ಬೀರಲಿಂಗೇಶ್ವರ ದೇವರು, ಆಂಜನೇಯ ಸ್ವಾಮಿ, ಮಾದವನಭಾವಿ ಗ್ರಾಮದ ಬೀರಲಿಂಗೇಶ್ವರ ಹಾಗೂ ರಂಗಪ್ಪ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮದ ಬೂದಿಗೌಡ್ರು ಮತ್ತು ಪಲ್ದಾರ್ ಗೌಡ್ರು ಮನೆಯಿಂದ ಅನ್ನದ ಹೆಡಿಗೆಯನ್ನು ಮೇರವಣಿಗೆ ಮೂಲಕ ತಂದು ಜೋಡಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥಕ್ಕೆ ಅನ್ನ ನೈವೇದ್ಯ ಮಾಡಿದರು.

ಗ್ರಾಮದ ಗುರುಗಳ ಮಂತ್ರಘೋಷದೊಂದಿಗೆ ರಥೋತ್ಸವಕ್ಕೆ ಪೂಜೆ ಮಂತ್ರಾಕ್ಷತೆ ನಂತರ ಒಂದು ರಥದಲ್ಲಿ ಜೋಡಿ ಶ್ರೀ ಬಸವೇಶ್ವರ ಮೂರ್ತಿ, ಇನ್ನೊಂದರಲ್ಲಿ ಶ್ರೀ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಶ್ರೀಬಸವೇಶ್ವರ ಸ್ವಾಮಿಗೆ ಜೈಕಾರದೊಂದಿಗೆ ರಥವನ್ನು ಗ್ರಾಮದ ಅಗಸೆ ಬಾಗಿಲಿನವರಗೆ ಎಳೆಯಲಾಯಿತು,

ರಥೋತ್ಸವ ಮುಂದೆ ಸಾಗುತ್ತಿದ್ದಂತೆ ಭಕ್ತರು ಮಂಡಕ್ಕಿ ಮೆಣಸಿನ ಕಾಳು ರಥಕ್ಕೆ ಎಸೆದು ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಭಕ್ತಿ ಸಮರ್ಪಿಸಿದರು.ರಾಜ ಬೀದಿಗಳಲ್ಲಿ ಕೊಂಬು, ಕಹಳೆ, ತಮಟೆ, ಬಾಜಭಜಂತ್ರಿ, ವೀರಗಸೆ ಹಾಗೂ ಮಂಗಳ ವಾದ್ಯದೊಂದಿಗೆ ದೇವರ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.

ಮಂಗಳವಾರ ಕಂಕಣ ಧಾರಣೆ, ಬುಧವಾರ ರಾತ್ರಿ ಆನೆ ಉತ್ಸವ, ರಾತ್ರಿ ಉಚ್ಚಾರಾಯನ ತೇರು, ರಥಕ್ಕೆ ಕಳಸರೋಹಣ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆದು ಗುರುವಾರ ಬೆಳಿಗ್ಗೆ ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭೀಷಕ ಮಾಡಲಾಗಿತ್ತು.

ದೇವಸ್ಥಾನ ಕಮಿಟಿಯ ಮುಖಂಡರಾದ ಕಲ್ಲಜ್ಜರ ಚಿಕ್ಕಪ್ಪ,ಈರಿ ಮಂಜಪ್ಪ,ಒಡೆರತ್ತೂರು ಪಾಲಪ್ಪ,ಮಣಚಿಕ್ಕಣರ ಚನ್ನಪ್ಪ,ಕಟ್ಟಗರಮಂಜಪ್ಪ,ಕಚ್ಚರೆಡೆ ಸಿದ್ದಪ್ಪ,ಎಂ..ಜಿ.ಸುರೇಶಪ್ಪ,ಬಿಜೆಪಿ ಜಗದೀಶ,ಸಣ್ಣಚಿಕ್ಕಪ್ಪಾರನಾಗರಾಜಪ್ಪ, ಬೆವಿನಹಳ್ಳಿ ಚಿಕ್ಕಪ್ಪ,ಸಣ್ಣಬಸಪ್ಪ ಇತರರು ಇದ್ದರು.