ಸಾರಾಂಶ
- ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ವಾಗ್ದಾಳಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಷ್ಟ್ರೀಯತೆ, ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಮತಯಾಚನೆ ಮಾಡುತ್ತಿದೆ. ಭಯೋತ್ಪಾದನೆ ಪೋಷಿಸುತ್ತಿರುವ, ಭಾರತದ ಅಭಿವೃದ್ಧಿ ಸಹಿಸದಿರುವ ಪಾಕಿಸ್ತಾನ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಬಯಸುತ್ತಿದೆ. ಇದರ ಅರ್ಥ ಏನು? ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪ್ರಶ್ನಿಸಿದರು.
ದಾವಣಗೆರೆ ಉತ್ತರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಶಾಮನೂರು, ಪಾಲಿಕೆ ವಾರ್ಡ್‌ಗಳಾದ 33, 34, 36ನೇ ವಾರ್ಡ್, ತರಳುಬಾಳು, ವಿನಾಯಕ ಬಡಾವಣೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ಭಾರತ ಪುನಃ ಭಯೋತ್ಪಾದನೆಗೆ ಗುರಿಯಾಗಬೇಕು, ಭಯೋತ್ಪಾದಕರು ಭಾರತದಲ್ಲಿ ಅಟ್ಟಹಾಸ ಮೆರಿಯಬೇಕು, ಭಾರತದ ಅಭಿವೃದ್ಧಿ ಕುಂಠಿತವಾಗಬೇಕು ಎಂದು ಪಾಕಿಸ್ತಾನ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ಇಂತಹ ಷಡ್ಯಂತ್ರಕ್ಕೆ ನಿಜವಾದ ಭಾರತೀಯರು ಉತ್ತರ ನೀಡಬೇಕು ಎಂದರೆ ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂದರು.ನರೇಂದ್ರ ಮೋದಿ ಜೀ ಅವರಂತಹ ಗಂಡೆದೆಯ ನಾಯಕ ಇರುವಾಗಲೇ ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆ. ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯರ ಹತ್ಯೆ ಮಾಡುತ್ತಾರೆ. ಅಂಗಡಿಗಳಲ್ಲಿ ಹನುಮಾನ್ ಚಾಲೀಸ್ ಪಠಣ ಮಾಡಿದರೆ ಹಲ್ಲೆ ಮಾಡುತ್ತಿದ್ದಾರೆ. ಇನ್ನು ಈ ದೇಶಕ್ಕೆ ರಾಹುಲ್ ಗಾಂಧಿಯಂತಹ ದುರ್ಬಲರು ಪ್ರಧಾನಿಯಾದರೆ ಈ ದೇಶವನ್ನು ಯಾರು ಕಾಪಾಡುತ್ತಾರೆ. ಈ ಬಗ್ಗೆ ಪ್ರಜ್ಞಾವಂತರು ಯೋಚಿಸಿ ಮತ ಹಾಕಬೇಕು ಎಂದು ಮನವಿ ಮಾಡಿದರು.
ನನ್ನ ಪತಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ದಾವಣಗೆರೆ ನಗರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಅನುದಾನತಂದಿದ್ದು ಜಿ.ಎಂ.ಸಿದ್ದೇಶ್ವರ್. ಆದರೆ, ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಅವರ ತಂದೆ ಕೆಲವೊಂದು ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿ ಅವೈಜ್ಞಾನಿಕ ಕಾಮಗಾರಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.ಅಶೋಕ ರೈಲ್ವೆ ಗೇಟ್ ಬಳಿ ಲಭ್ಯ ಜಾಗ ಬಳಸಿ, ಸಣ್ಣ ವಾಹನ ಓಡಾಡಲು ಸೇತುವೆ ನಿರ್ಮಾಣ ಮಾಡಿದ್ದೇವೆ. ಮುಂದುವರಿದ ಭಾಗವಾಗಿ ಪದ್ಮಾಂಜಲಿ ಚಿತ್ರಮಂದಿರದ ಬಳಿ 2 ಬೃಹತ್ ಗಾತ್ರದ ವೆಂಟ್ ಗಳುಳ್ಳ ಸೇತುವೆ ನಿರ್ಮಾಣಕ್ಕೆ ₹49 ಕೋಟಿ ಮಂಜೂರು ಮಾಡಿಸಿದ್ದೇವೆ. ಪ್ರಥಮ ಆದ್ಯತೆ ಮೇರೆಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಸಂಸದ ಜಿ.ಎಂ. ಸಿದ್ದೇಶ್ವರ್ ಮಾಡಿರುವ ಅಭಿವೃದ್ಧಿ ಕೆಲಸಗಳೇ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆ. ದೇಶದಲ್ಲಿ ಮೋದಿ ಹವಾ ಬಿಟ್ಟರೆ ಬೇರೆಯವರ ಹವಾ ಇಲ್ಲ. ದಾವಣಗೆರೆಯಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ 1.5 ಲಕ್ಷ ಲೀಡ್‌ನಲ್ಲಿ ಗೆಲ್ಲುತ್ತಾರೆ ಎಂದುಕೊಂಡಿದ್ದೆವು. ಪ್ರಿಯಾಂಕಾ ಗಾಂಧಿ ಬಂದುಹೋದ ಮೇಲೆ ನಾವು 3 ಲಕ್ಷ ಲೀಡ್‌ನಲ್ಲಿ ಗೆಲ್ಲುತ್ತೇವೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.ಈ ಸಂದರ್ಭ ಬಿಜೆಪಿ ಮುಖಂಡರಾದ ಸಂಕೋಳ್ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಗ್ಯಾರಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ವೀರೇಶ್, ಚಂದ್ರಪ್ಪ, ಗೌಡರು ಚನ್ನಪ್ಪ, ಯುವರಾಜ್, ರಾಜು, ನಿಂಗರಾಜ್, ಮಂಡಲದ ಅಧ್ಯಕ್ಷರು, ಬಿಜೆಪಿ ಮುಖಂಡರು, ಗ್ರಾಮದ ಮುಖಂಡರು, ಕಾರ್ಯಕರ್ತರು ಇದ್ದರು.
- - - -4ಕೆಡಿವಿಜಿ45, 46ಃ:ದಾವಣಗೆರೆಯ ದಾವಣಗೆರೆ ಉತ್ತರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಶಾಮನೂರು, ಪಾಲಿಕೆ ವ್ಯಾಪ್ತಿಯ 33, 34, 36ನೇ ವಾರ್ಡ್, ತರಳುಬಾಳು, ವಿನಾಯಕ ಬಡಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ ಮಾಡಿದರು.