ಸಾರಾಂಶ
ಪಹಲ್ಗಾಮ್ ದಾಳಿಯಲ್ಲಿ ಅಮಾಯಕ ಹಿಂದೂಗಳನ್ನು ಹತ್ತೆ ಮಾಡಲಾಗಿದೆ. ಇದನ್ನು ಇಡೀ ದೇಶ ಖಂಡಿಸುತ್ತಿದೆ. ಹೀಗಾಗಿ, ಪಾಕಿಸ್ತಾನಿಗಳು ದೇಶ ದೊರೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದು ಕೂಡಲೇ ತೊರೆಯಬೇಕು.
ಕೊಪ್ಪಳ:
ಪಹಲ್ಗಾಮ್‌ನಲ್ಲಿ ಉಗ್ರರು ಹಿಂದೂಗಳನ್ನು ಹತ್ಯೆ ಮಾಡಿರುವುದನ್ನು ಖಂಡಿಸಿರುವ ಬಿಜೆಪಿ, ಪಾಕಿಸ್ತಾನಿಗಳೇ ಭಾರತ ಬಿಟ್ಟು ತೊಲಗಿ ಎಂದು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು.ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಪಾಕಿಸ್ತಾನಿಗಳನ್ನು ಈಗಾಗಲೇ ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರೂ ಕೆಲವರು ಇಲ್ಲಿಯೇ ಇದ್ದಾರೆ. ಇನ್ನಾದರೂ ಭಾರತ ಬಿಟ್ಟು ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಹಿತಕ್ಕೆ ಧಕ್ಕೆ ತರುವ ಅನ್ಯದೇಶಿಯರು ದೇಶದಲ್ಲಿ ಇರಕೂಡದು ಎಂದ ಅವರು, ಪಹಲ್ಗಾಮ್ ದಾಳಿಯಲ್ಲಿ ಅಮಾಯಕ ಹಿಂದೂಗಳನ್ನು ಹತ್ತೆ ಮಾಡಲಾಗಿದೆ. ಇದನ್ನು ಇಡೀ ದೇಶ ಖಂಡಿಸುತ್ತಿದೆ. ಹೀಗಾಗಿ, ಪಾಕಿಸ್ತಾನಿಗಳು ದೇಶ ದೊರೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದು ಕೂಡಲೇ ತೊರೆಯುವಂತೆ ಆಗ್ರಹಿಸಿದರು.ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಭಾರತದಲ್ಲಿ ಪಾಕಿಸ್ತಾನಿಗಳು ಅಧಿಕೃತವಾಗಿ, ಅನಧಿಕೃತವಾಗಿ ನೆಲೆಯೂರಿದ್ದಾರೆ. ಇಂಥವರನ್ನು ದೇಶದಲ್ಲಿಟ್ಟುಕೊಳ್ಳದೆ ಮೊದಲು ಹೊರಹಾಕಬೇಕು ಎಂದ ಅವರು, ಪಾಕಿಸ್ತಾನಿಗಳಿಗೆ ಯಾರೂ ಆಶ್ರಯ ನೀಡಬಾರದು ಎಂದರು.
ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಪಹಲ್ಗಾಮ್‌ನಲ್ಲಿ ನಡೆದ ದಾಳಿ ಮತ್ತೆ ದೇಶದಲ್ಲಿ ನಡೆಯಬಾರದು ಎಂಬ ಉದ್ದೇಶದಿಂದ ಶತ್ರು ದೇಶದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದರು.ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಗಣೇಶ ಹೊರತಟ್ನಾಳ್, ಮುಖಂಡ ಮಾಂತೇಶ ಮೈನಳ್ಳಿ. ವೀರೇಶ ಸಜ್ಜನ. ಮಂಜುಳಾ ವಿಶ್ವನಾಥ. ಮಹಾಲಕ್ಷ್ಮೀ ಕಂದಾರಿ, ಮಹೇಶ ಅಂಗಡಿ, ಕೀರ್ತಿ ಪಾಟೀಲ್, ಮಹೇಶ ಹಾದಿಮನಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಹೇಮಲತಾ ನಾಯಕ ಕಣ್ಣೀರು
ಪ್ರತಿಭಟನೆಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಹಾಗೂ ಮಹಿಳಾ ಮುಖಂಡೆ ಮಹಾಲಕ್ಷ್ಮಿ ಕಂದಾರಿ ನಡುವೆ ಜಟಾಪಟಿ ನಡೆಯಿತು. ಮನವಿ ಪತ್ರ ಓದುವ ಸಲುವಾಗಿ ಪ್ರಾರಂಭವಾದ ವಿವಾದ ರಾಜೀ ಪಂಚಾಯಿತಿ ವರೆಗೂ ನಡೆಯಿತು.ಆಗಿದ್ದೇನು?:
ಮನವಿ ಪತ್ರವನ್ನು ಸಾಮಾನ್ಯವಾಗಿ ಜಿಲ್ಲಾಧ್ಯಕ್ಷರು ಓದುತ್ತಾರೆ. ಆದರೆ, ಅವರು ಓದದೇ ಇರುವುದರಿಂದ ಮಹಾಲಕ್ಷ್ಮಿ ಓದಲು ಮುಂದಾದರು. ಆಗ ಹೇಮಲತಾ ಆಕ್ಷೇಪಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓದಲಿ ಎಂದರು. ಮನವಿ ಪತ್ರ ಓದುವ ಪ್ರಕ್ರಿಯೇ ಮುಗಿದ ಮೇಲೆ ಎಲ್ಲರು ಹೊರಡುವಾಗ ಮಹಾಲಕ್ಷ್ಮಿ ಹೇಮಲತಾ ಅವರನ್ನು ನಿಂದಿಸಿ ಮಾತನಾಡಿದರು. ಇದು ಇಬ್ಬರ ನಡುವೆ ಜಟಾಪಟಿಗೆ ಸಾಕ್ಷಿಯಾಯಿತು. ಮಾತಿಗೆ ಮಾತು ಬೆಳೆದು ರಾದ್ಧಾಂತವಾಯಿತು. ಕೊನೆಗೆ ಬಿಜೆಪಿ ಕಾರ್ಯಾಲಯದಲ್ಲಿ ರಾಜೀ ಪಂಚಾಯಿತಿ ಮಾಡಲಾಯಿತು. ಆಗಲೂ ಪರಸ್ಪರ ವಾದವಾಯಿತು. ಇದಷ್ಟೇ ಅಲ್ಲದೆ ಈ ಹಿಂದೆ ನಡೆದ ಹಲವಾರು ಘಟನೆಗಳನ್ನು ಪ್ರಸ್ತಾಪಿಸಲಾಯಿತು. ಕೊನೆಗೆ ಮುಖಂಡರು ಇಬ್ಬರನ್ನು ಕೂಡ್ರಿಸಿಕೊಂಡು ರಾಜೀ ಮಾಡಿದ್ದಾರೆ.ಕಣ್ಣೀರಿಟ್ಟ ಹೇಮಲತಾ:
ಘಟನೆ ಕುರಿತು ಹೇಮಲತಾ ನಾಯಕ ಕಣ್ಣೀರಿಟ್ಟಿದ್ದಾರೆ. ಇಲ್ಲಿ ಮಾತ್ರವಲ್ಲದೆ ನನ್ನ ಕುರಿತು ಬಹಳ ಹಗುರವಾಗಿ ಮಾತನಾಡಿದ್ದಾಳೆ. ಇದೆಲ್ಲವೂ ನನ್ನ ಕಿವಿಗೆ ಬಿದ್ದಿದೆ. ಆದರೂ ಸಹ ಪದೇಪದೇ ಈ ರೀತಿ ಮಹಾಲಕ್ಷ್ಮಿ ಮಾಡುತ್ತಿದ್ದಾಳೆ ಎಂದು ಕಣ್ಣೀರು ಹಾಕಿದರು.