ಜಿಲ್ಲೆಯಲ್ಲಿ ಪಾಕಿಗಳು ಅಕ್ರಮ ವಾಸವಿರುವ ಗುಮಾನಿ; ಹೊರಗಿನಿಂದ ಬರುವ ಜನರ ಮೇಲೆ ನಿಗಾ ಇಲ್ಲ

| Published : Apr 28 2025, 12:47 AM IST

ಜಿಲ್ಲೆಯಲ್ಲಿ ಪಾಕಿಗಳು ಅಕ್ರಮ ವಾಸವಿರುವ ಗುಮಾನಿ; ಹೊರಗಿನಿಂದ ಬರುವ ಜನರ ಮೇಲೆ ನಿಗಾ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅದಕ್ಕಾಗಿ ಕೇಂದ್ರಸರ್ಕಾರದ ಸೂಚನೆಯಂತೆ ವೀಸಾ ಮೇಲೆ ಬಂದಿರುವ ಮುಸಲ್ಮಾನರನ್ನಷ್ಟೇ ಪರಿಶೀಲಿಸಿರುವ ಪೊಲೀಸರು ಅಕ್ರಮವಾಗಿ ನೆಲೆಸಿರಬಹುದಾದ ಪಾಕಿಸ್ತಾನದವರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಉಗ್ರರು ಪಹಲ್ಗಾಂನಲ್ಲಿ ಹಿಂದೂಗಳ ನರಮೇಧ ನಡೆಸಿದ ಬೆನ್ನಹಿಂದೆಯೇ ವೀಸಾ ಮೇಲೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನದವರನ್ನು ವಾಪಸ್ ತವರಿಗೆ ಕಳುಹಿಸಲಾಗಿದೆ. ಆದರೆ, ಅಕ್ರಮವಾಗಿ ನೆಲೆಸಿರುವ ಪಾಕಿಗಳನ್ನು ಗುರುತಿಸುವುದೇ ಕೇಂದ್ರ ಗುಪ್ತಚರ ಇಲಾಖೆ ಪೊಲೀಸರು ಹಾಗೂ ರಾಜ್ಯ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸಕ್ಕರೆ ಜಿಲ್ಲೆ ಮಂಡ್ಯ ಮೇಲ್ನೋಟಕ್ಕೆ ಕೃಷಿಕರ ನೆಲವೀಡಾಗಿ ಕಂಡುಬಂದರೂ ಜಿಲ್ಲೆಯ ಹಲವು ಭಾಗಗಳಲ್ಲಿ ಮುಸ್ಲಿಂ ಸಂಘಟನೆಗಳ ಕಾರ್ಯಚಟುವಟಿಕೆಗಳು ಸದ್ದಿಲ್ಲದೆ ಗುಪ್ತವಾಗಿ ನಡೆಯುತ್ತಲೇ ಇವೆ. ಹೊರಗಿನಿಂದ ಹಲವು ಮುಸ್ಲಿಂ ಮುಖಂಡರು ಬಂದು ಹೋಗುತ್ತಿದ್ದರೂ ಅವರ ಮೇಲೆ ಯಾರೂ ಗಮನಹರಿಸುತ್ತಲೇ ಇಲ್ಲ. ಸ್ಥಳೀಯವಾಗಿ ಸಕ್ರಿಯವಾಗಿರುವ ವಿವಿಧ ಸಂಘಟನೆಗಳ ಸದಸ್ಯರು ಅವರಿಗೆ ಬೆಂಗಾವಲಾಗಿ ನಿಂತಿರುವುದರಿಂದ ಅವರ ಕಾರ್ಯಚಟುವಟಿಕೆಗಳು ಹೊರಜಗತ್ತಿನ ಗಮನಕ್ಕೇ ಬಾರದಂತಾಗಿದೆ.

೨೦೧೯ರ ಅಕ್ಟೋಬರ್‌ನಲ್ಲಿ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯ ಮಾಹಿತಿ ದೊರಕಿತ್ತು. ಜೊತೆಯಲ್ಲೇ ನಾಲ್ವರು ಶಂಕಿತ ಉಗ್ರರ ಬಂಧನದ ವದಂತಿಯೂ ಸೃಷ್ಟಿಯಾಗಿತ್ತು. ಈ ಬೆಳವಣಿಗೆಯಾದ ಕೆಲವು ದಿನಗಳಲ್ಲೇ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲ್‌ನ ಕಬ್ಬಿನ ಗದ್ದೆಯ ಮರೆಯಲ್ಲಿ ರಹಸ್ಯವಾಗಿ ಪರೇಡ್ ನಡೆಸುತ್ತಿದ್ದ ಆರೋಪದ ಮೇಲೆ ೧೬ ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಆ ಸಮಯದಲ್ಲಿ ಉಗ್ರರ ಜಾಡು ಗುಪ್ತಗಾಮಿನಿಯಂತೆ ಮಂಡ್ಯ ಜಿಲ್ಲೆಯೊಳಗೆ ಹರಿದಾಡುತ್ತಿದೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿತ್ತು.

ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲು, ಲಕ್ಷ್ಮೀಪುರ, ದಬ್ಬೇಘಟ್ಟ ಈ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದಲೂ ಗುಪ್ತ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಈ ಮೂರು ಕಡೆ ಮಸೀದಿ ಹಾಗು ದರ್ಗಾಗಳು ಊರಿನ ಹೊರಭಾಗದ ನಿರ್ಜನ ಪ್ರದೇಶದಲ್ಲಿವೆ. ಈ ಮೂರು ಪ್ರದೇಶಗಳಿಗೆ ಹೊರಗಿನಿಂದ ಬರುವವರೇ ಹೆಚ್ಚು ಎಂಬ ಸಂದೇಹವಿದೆ. ಅಲ್ಲಿ ಏನು ಕಾರ್ಯಚಟುವಟಿಕೆ ನಡೆಯುತ್ತಿದೆ, ಅಲ್ಲಿಗೆ ಯಾರು ಬರುತ್ತಾರೆ, ಎಲ್ಲಿಂದ ಬರುತ್ತಾರೆ, ಏಕೆ ಬರುತ್ತಾರೆ ಎಂಬ ಬಗ್ಗೆ ಯಾರಿಗೂ ಮಾಹಿತಿಯೇ ಇಲ್ಲ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕನ್ನು ಪಡೆದುಕೊಳ್ಳಲೇ ಇಲ್ಲ. ಇವತ್ತಿನವರೆಗೂ ಮಸೀದಿ, ದರ್ಗಾಗಳಿಗೆ ಪೊಲೀಸರು ತೆರಳಿ ಪರಿಶೀಲನೆಯನ್ನೂ ನಡೆಸಿಯೇ ಇಲ್ಲ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಇಂದಿಗೂ ರಹಸ್ಯವಾಗಿಯೇ ಉಳಿದುಕೊಂಡಿದೆ.

ನರೇಂದ್ರಮೋದಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮೈಸೂರಿಗೆ ಆಗಮಿಸುವ ಸಮಯದಲ್ಲೂ ಶ್ರೀರಂಗಪಟ್ಟಣದ ಹೋಟೆಲ್‌ಗಳಲ್ಲಿ ಉಗ್ರರು ಅಡಗಿರುವ ಬಗ್ಗೆ ತೀವ್ರ ತಪಾಸಣೆ ನಡೆಸಲಾಗಿತ್ತು. ಜಿಲ್ಲೆಯ ಹಲವೆಡೆ ಮಸೀದಿಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಲೇ ಇವೆ. ಶ್ರೀರಂಗಪಟ್ಟಣದ ಬೊಮ್ಮೂರು ಅಗ್ರಹಾರ ಬಳಿ ಮಸೀದಿ ನಿರ್ಮಾಣ ವಿಚಾರವಾಗಿ ಸುತ್ತಮುತ್ತಲ ಗ್ರಾಮದವರು ಸಿಡಿದೆದ್ದು ನಿರ್ಮಾಣ ಕಾರ್ಯವನ್ನು ಅರ್ಧಕ್ಕೇ ನಿಲ್ಲಿಸಿದ್ದಾರೆ. ಶ್ರೀರಂಗಪಟ್ಟಣಕ್ಕೂ ಹೊರಗಿನಿಂದ ಸಾಕಷ್ಟು ಮುಸಲ್ಮಾನರು ಬರುತ್ತಿದ್ದರೂ ಅವರನ್ನು ಗುರುತಿಸುವ ಪ್ರಯತ್ನಗಳು ಯಾರಿಂದಲೂ ನಡೆಯದಿರುವುದು ಅಕ್ರಮವಾಗಿ ಪಾಕಿಸ್ತಾನದವರು ನೆಲೆಸಿದ್ದಾರೆಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹೊರಗಿನಿಂದ ಬರುವ ಮುಸಲ್ಮಾನರಿಗೆ ಸ್ಥಳೀಯರು ಆಶ್ರಯ ನೀಡುತ್ತಿರುವುದರಿಂದ ಗುರುತು ಪತ್ತೆ ಮಾಡುವುದು ಸುಲಭವಾಗಿಲ್ಲ. ಅವರೇ ಎಲ್ಲಾ ಕಡೆಗೆ ಕರೆದುಕೊಂಡು ಹೋಗಿ ಸ್ಥಳಗಳನ್ನೆಲ್ಲಾ ಪರಿಚಯಿಸುತ್ತಾರೆ. ಎರಡರಿಂದ ಮೂರು ದಿನ ಇರುವ ಹೊರಗಿನವರು ನಂತರ ಮುಂದಿನ ಊರುಗಳಿಗೆ ಶಿಫ್ಟ್ ಆಗುತ್ತಾರೆ. ಒಮ್ಮೊಮ್ಮೆ ಹೊರಗಿನಿಂದ ಬರುವ ಮುಸಲ್ಮಾನರ ಬಗ್ಗೆ ಪೊಲೀಸರಿಗೆ ಶಂಕೆ ಮೂಡಿದರೂ ವಿನಾಕಾರಣ ಅದನ್ನು ಕೆದಕಲು ಹೋಗುವುದಿಲ್ಲ. ಮುಸಲ್ಮಾನರು ದೊಡ್ಡ ಗುಂಪುಕಟ್ಟಿಕೊಂಡು ಬರುವುದರಿಂದ ಹಿಂಜರಿಯುವುದು ಸಾಮಾನ್ಯವಾಗಿದೆ.

ಅದಕ್ಕಾಗಿ ಕೇಂದ್ರಸರ್ಕಾರದ ಸೂಚನೆಯಂತೆ ವೀಸಾ ಮೇಲೆ ಬಂದಿರುವ ಮುಸಲ್ಮಾನರನ್ನಷ್ಟೇ ಪರಿಶೀಲಿಸಿರುವ ಪೊಲೀಸರು ಅಕ್ರಮವಾಗಿ ನೆಲೆಸಿರಬಹುದಾದ ಪಾಕಿಸ್ತಾನದವರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುತ್ತಿಲ್ಲ. ಮುಸಲ್ಮಾನರಿರುವ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸುವ ಧೈರ್ಯ ಯಾವೊಬ್ಬ ಅಧಿಕಾರಿಗಳಿಗೂ ಇಲ್ಲದಿರುವುದರಿಂದ ಪಾಕಿಸ್ತಾನ, ಬಾಂಗ್ಲಾ ದೇಶಗಳಿಂದ ಬರುವ ಮುಸಲ್ಮಾನರಿಗೆ ಸ್ಥಳೀಯ ಮುಸ್ಲಿಮರು ನೆಲೆಸಿರುವ ಪ್ರದೇಶ ಸುರಕ್ಷಿತ ಎಂಬ ಭಾವನೆ ಮೂಡಿದೆ.

ಸ್ಥಳೀಯವಾಗಿ ನೆಲೆಸಿರುವ ಹಿಂದೂಗಳು ಇವೆಲ್ಲದರ ಬಗ್ಗೆ ಚಿಂತಿಸುವುದಕ್ಕೆ ಹೋಗುವುದೇ ಇಲ್ಲ. ಮುಸ್ಲಿಂ ಸಂಘಟನೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ದನಿ ಎತ್ತಿದರೂ ಪ್ರಯೋಜನವಾಗುತ್ತಿಲ್ಲ. ಈ ವಿಚಾರವಾಗಿ ತಿರುಗಿಬಿದ್ದರೂ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ. ಅದಕ್ಕಾಗಿ ಹಿಂದೂ ಕಾರ್ಯಕರ್ತರು ಕೂಡ ಸಂಘಟನೆಯಿಂದ ದೂರ ಸರಿಯುತ್ತಿದ್ದಾರೆ. ಇವೆಲ್ಲವೂ ಅಕ್ರಮವಾಸಿಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ.