ಮಡಿಕೇರಿ: ಕ್ಷೇತ್ರದ ಜನತೆಯನ್ನು ದಶಕಗಳಿಂದ ಕಾಡುತ್ತಿರುವ ಆನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ, ಈಗಾಗಲೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಲವಾರು ಪ್ರಮುಖ ನಿರ್ಣಯಗಳನ್ನು ಕೈಗೊಂಡು, ಕ್ಷೇತ್ರಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ.ಅದರ ಭಾಗವಾಗಿ ವಿರಾಜಪೇಟೆ ತಾಲೂಕು ಪಾಲಂಗಾಲ ಗ್ರಾಮಕ್ಕೆ ಆಗಮಿಸಿದ ಶಾಸಕರು, ಈ ಭಾಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಆನೆ ಹಾವಳಿ ತಡೆಗಟ್ಟಲು 28 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಹ್ಯಾಂಗಿಂಗ್ ಸೋಲಾರ್ ಪೆನ್ಸಿಂಗ್ ಕಾಮಗಾರಿಗೆ ಚಾಲನೆ ನೀಡಿದರು. ಈಗಾಗಲೇ ಈ ಸಂಬಂಧ ನಡೆಯುತ್ತಿರುವ ಕಾಮಗಾರಿಯ ವೀಕ್ಷಣೆ ಹಾಗೂ ಅಧಿಕಾರಿಗಳಿಂದ ಇದರ ಬಗ್ಗೆ ಸಂಪೂರ್ಣ ವಿವರಣೆಗಳನ್ನು ಪಡೆದರು.
ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆ ವತಿಯಿಂದ ಅರಣ್ಯ ಗಂಚಿನಲ್ಲಿ ವಾಸಿಸುತ್ತಿರುವ ಮಹಿಳೆಯರು ಸ್ವಾವಲಂಬಿ ಆಗಲು ನೀಡುವ ಹೊಲಿಗೆ ಯಂತ್ರ ಹಾಗೂ ಇತರ ಸೌಲತ್ತುಗಳನ್ನು ಶಾಸಕರು ವಿತರಿಸಿದರು.ಬಳಿಕ ಮಾತನಾಡಿದ ಶಾಸಕರು, ತನ್ನ ಕೋರಿಕೆ ಹಾಗೂ ಪ್ರಯತ್ನದ ಮೇರೆಗೆ, ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರು ಈಗಾಗಲೇ ಮಾನವ- ಪ್ರಾಣಿ ಸಂಘರ್ಷ ತಡೆಗಟ್ಟುವ ಸಲುವಾಗಿ ನೂರಾರು ಕೋಟಿ ಅನುದಾನವನ್ನು ಒದಗಿಸಿದ್ದು, ಕ್ಷೇತ್ರಾದ್ಯಂತ ತೀವ್ರತೆಗೆ ಅನುಸಾರವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಇದರಲ್ಲಿ ಸೋಲಾರ್ ಫೆನ್ಸಿಂಗ್, ಸೋಲಾರ್ ಹ್ಯಾಂಗಿಂಗ್ ಸೆನ್ಸಿಂಗ್, ರೈಲ್ವೆ ಬ್ಯಾರಿಕೇಡ್ ಅಳವಡಿಕೆ, ಆನೆ ಕಂದಕ ನಿರ್ಮಾಣ, ಅರಣ್ಯ ಇಲಾಖೆಯವರಿಗೆ ನೂತನ ಹಾಗೂ ಆಧುನಿಕ ಪ್ಯಾಟ್ರೋಲಿನ್ ವಾಹನಗಳು, ಅರಣ್ಯ ಇಲಾಖೆಗೆ ಹೆಚ್ಚಿನ ಅನುಭವಿ ಹಾಗೂ ತರಬೇತಿ ಪಡೆದಿರುವ ಸಿಬ್ಬಂದಿ ಮಾತ್ರವಲ್ಲದೆ ಇನ್ನೂ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಜಾಗೃತಿವಹಿಸಿಕೊಂಡು, ಅರಣ್ಯ ಅಂಚಿನಲ್ಲಿರುವ ನಿವಾಸಿಗಳು ವಿಶೇಷ ಜಾಗೃತಿಯಿಂದ ತಮ್ಮ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅರಣ್ಯ ಅಧಿಕಾರಿಗಳು ಸಹ ಜನರೊಂದಿಗೆ ಸ್ನೇಹದಿಂದ ವರ್ತಿಸಿ, ಜನರೊಂದಿಗೆ ಉತ್ತಮ ಒಡನಾಟ ಇರಿಸಿಕೊಂಡಲ್ಲಿ ಇಂತಹ ಸಂಘರ್ಷಗಳನ್ನು ತಡೆಗಟ್ಟುವುದು ಮತ್ತಷ್ಟು ಸುಲಭವಾಗಲಿದೆ ಎಂದು ಕಿವಿಮಾತು ಹೇಳಿದರು.ವಲಯ ಅಧ್ಯಕ್ಷರು ನಡಿಕೇರಿಯಂಡ ಮಹೇಶ್, ಕೆಡಿಪಿ ಸದಸ್ಯರು ಪ್ರಶಾಂತ್, ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ಬೂತ್ ಅಧ್ಯಕ್ಷರು ವಿಜಯ್ ಕುಮಾರ್, ಮಾಜಿ ಅಧ್ಯಕ್ಷರು ಜೆಫ್ರೀ ಉತ್ತಪ್ಪ, ಇಸ್ಮಾಯಿಲ್, ಆಲಿ, ಮಳೇಟೀರ ಶುಭ ಸುಬ್ಬಯ್ಯ, ಪಕ್ಷದ ಮುಖಂಡರು ಬಾಚಮಾಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಜಿತನ್, ಧ್ಯಾನಿ, ಪಾಲಂಗಾಲ ಬೂತ್ ಅಧ್ಯಕ್ಷರು ಜಾಲು ಚೆಂಗಪ್ಪ, ಮಿಟ್ಟು ಅಯ್ಯಪ್ಪ, ಹರಿದಾಸ್, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.