ತಾಳೆ ಬೆಳೆಯಂತಹ ವಾಣಿಜ್ಯ ಬೆಳೆಗಳನ್ನು ವೈಜ್ಞಾನಿಕ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಮೂಲಕ ಬೆಳೆಸಲು ಮುಂದಾಗಬೇಕು ಎಂದು ಹಾವೇರಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಸಪ್ಪಂಡಿ ಹೇಳಿದರು.
ಶಿಗ್ಗಾಂವಿ: ತಾಳೆ ಬೆಳೆ ಉತ್ತರ ಕರ್ನಾಟಕದ ರೈತರ ಆರ್ಥಿಕ ಪ್ರಗತಿಗೆ ಪೂರಕವಾಗಿದ್ದು, ಕಡಿಮೆ ನಿರ್ವಹಣೆಯೊಂದಿಗೆ ದೀರ್ಘಕಾಲದವರೆಗೆ ಆದಾಯ ತಂದುಕೊಡುವ ಸಾಮರ್ಥ್ಯ ಹೊಂದಿದೆ. ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯೊಂದಿಗೆ ತೋಟಗಾರಿಕಾ ಬೆಳೆಗಳತ್ತಲೂ ಗಮನಹರಿಸಿ, ತಾಳೆ ಬೆಳೆಯಂತಹ ವಾಣಿಜ್ಯ ಬೆಳೆಗಳನ್ನು ವೈಜ್ಞಾನಿಕ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಮೂಲಕ ಬೆಳೆಸಲು ಮುಂದಾಗಬೇಕು ಎಂದು ಹಾವೇರಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಸಪ್ಪಂಡಿ ಹೇಳಿದರು.
ತಾಲೂಕಿನ ಬಿಸನಳ್ಳಿ ಗ್ರಾಮದ ಉಮೇಶ ಅಂಗಡಿ ಅವರ ತಾಳೆ ಬೆಳೆ ತೋಟದಲ್ಲಿ ಶಿಗ್ಗಾಂವಿ ತೋಟಗಾರಿಕಾ ಇಲಾಖೆ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ''''''''ತಾಳೆ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಮತ್ತು ಆಧುನಿಕ ತಂತ್ರಜ್ಞಾನ'''''''' ಕುರಿತ ರೈತರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ತಾಳೆ ಬೆಳೆಯು ರೈತರಿಗೆ ದೀರ್ಘಕಾಲಿಕ ಆದಾಯದ ಮೂಲವಾಗಬಲ್ಲದು. ವೈಜ್ಞಾನಿಕ ಪದ್ಧತಿಯಲ್ಲಿ ಸಸಿಗಳನ್ನು ನಾಟಿ ಮಾಡುವುದು, ಸಮರ್ಪಕ ನೀರಾವರಿ, ಪೋಷಕಾಂಶಗಳ ನಿರ್ವಹಣೆ, ಕೀಟ ಹಾಗೂ ರೋಗಗಳ ನಿಯಂತ್ರಣ ಸೇರಿದಂತೆ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ತೋಟಗಾರಿಕಾ ಇಲಾಖೆಯಿಂದ ರೈತರಿಗೆ ತಾಳೆ ಬೆಳೆ ಕುರಿತು ಅಗತ್ಯ ತಾಂತ್ರಿಕ ಮಾರ್ಗದರ್ಶನ ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ದೊರೆಯುವ ಸೌಲಭ್ಯಗಳ ಮಾಹಿತಿ ನೀಡಲಾಗುತ್ತಿದೆ. ರೈತರು ಇಂತಹ ತರಬೇತಿ ಕಾರ್ಯಾಗಾರಗಳ ಪ್ರಯೋಜನ ಪಡೆದು ತಾಳೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಳೆ ಬೆಳೆಯು ರೈತರಿಗೆ ಮಾತ್ರವಲ್ಲದೆ ಕೃಷಿ ಆಧಾರಿತ ಉದ್ಯಮಗಳಿಗೂ ಅನುಕೂಲಕರವಾಗಿದೆ. ತಾಳೆ ಹಣ್ಣಿನಿಂದ ದೊರೆಯುವ ಎಣ್ಣೆಗೆ ಆಹಾರ ಉದ್ಯಮದಲ್ಲಿ ಬೇಡಿಕೆಯಿದ್ದು, ಇದರಿಂದ ಎಣ್ಣೆ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರುಕಟ್ಟೆ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತದೆ. ರೈತರು ಇತರ ಬೆಳೆಗಳೊಂದಿಗೆ ತಾಳೆ ಬೆಳೆಯನ್ನು ಅಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ವೈವಿಧ್ಯತೆ ಸಾಧಿಸುವುದರ ಜೊತೆಗೆ ಭವಿಷ್ಯದಲ್ಲಿ ಆದಾಯದ ಸ್ಥಿರತೆ ಕಂಡುಕೊಳ್ಳಲು ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.ಕಾರ್ಯಾಗಾರದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾದ ಡಾ. ಚಂದ್ರಾವತಿ ಬಿ., ಸಂಗೀತಾ ಕುರೇರ, ಹಿರಿಯ ತಾಂತ್ರಿಕ ಅಧಿಕಾರಿ ಡಾ. ಲಿಂಗರಾಜ್ ಎಲ್ ಮಾತನಾಡಿ, ತಾಳೆ ಬೆಳೆಯ ಬೇಸಾಯ ಕ್ರಮಗಳು, ನಿರ್ವಹಣೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ನವಕಲ್ಪ ವೃಕ್ಷ ತಾಳೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಉಮೇಶ ಅಂಗಡಿ ಹಾಗೂ ರೈತ ಮುಖಂಡ ಶಶಿಧರ ಹೊನ್ನಣ್ಣವರ, ಪ್ರಗತಿಪರ ರೈತ ರವಿ ಕುಲಕರ್ಣಿ, ಮುಖಂಡ ವೀರೇಶ ಆಜೂರ ಸೇರಿದಂತೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಪ್ರಗತಿಪರ ರೈತರು ಹಾಗೂ ರೈತರು ಇದ್ದರು.