ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಳ ಜಾತ್ರೆ ಸಂಪನ್ನ

| Published : Apr 19 2025, 12:37 AM IST

ಸಾರಾಂಶ

ಏ.13ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪಾಲೂರು ಗ್ರಾಮದ ಶ್ರೀಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಪಾಲೂರು ಗ್ರಾಮದ ಶ್ರೀಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಏ.13ರಂದು ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಏ.14ರಂದು ಗಣಹೋಮ ಮತ್ತು ಕೊಡಿಮರ ಏರಿಸುವುದು, ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಉತ್ಸವ ಬಲಿ ನೆರವೇರಿ, ಏ.16ರಂದು ಉತ್ಸವ ಬಲಿ ಮತ್ತು ರಾತ್ರಿ ದೀಪಾರಾಧನೆ, ಗುರುವಾರ ಹಗಲು ಉತ್ಸವ ಬಲಿ ನಡೆದು ಸಂಜೆ ದೀಪಾರಾಧನೆ ನಡೆಯಿತು.

ಶುಕ್ರವಾರ ಪಟ್ಟಣಿ ಹಬ್ಬ ಉತ್ಸವದ ಅಂಗವಾಗಿ ಬೆಳಗ್ಗೆ ತುಲಾಭಾರ ಸೇವೆ ಸೇರಿದಂತೆ ವಿವಿಧ ಹರಕೆ ಸೇವೆ, ಕಾಣಿಕೆಗಳನ್ನು ಒಪ್ಪಿಸಿ ಮಧ್ಯಾಹ್ನ ಎತ್ತು ಪೋರಾಟ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ವಿಶೇಷ ಸೇವೆಗಳು ಜರುಗಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಮತ್ತು ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ನಂತರ ಜೋಡಿ ದೇವರ ನೃತ್ಯೋತ್ಸವ ನಡೆಯಿತು. ದೇವಾಲಯದ ಮುಖ್ಯ ಅರ್ಚಕ ದೇವಿಪ್ರಸಾದ್, ತಂತ್ರಿಗಳಾಗಿ ಕೃಷ್ಣ, ಮತ್ತು ಸತ್ಯಮೂರ್ತಿ ಸರಳಾಯ, ಕೃಷ್ಣಮೂರ್ತಿ ಇನ್ನಿತರರು ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ಜಾತ್ರಾ ಮಹೋತ್ಸವದಲ್ಲಿ ದೇವಾಲಯದ ಭಂಡಾರ ತಕ್ಕರಾದ ಎಡಕೇರಿ ಪ್ರವೀಣ್, ಸಮಿತಿ ಅಧ್ಯಕ್ಷ ಪೊದವಾಡ ಸುಜೈ, ಕಾರ್ಯದರ್ಶಿ ಸೂಧನ ಮದನ್ ಹಾಗೂ ಸದಸ್ಯರು, ಪಾರುಪತ್ತೆಗಾರ ಟಿ.ಕೆ.ಮನು, ತಕ್ಕ ಮುಖ್ಯಸ್ಥರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿ, ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಊರ ಮತ್ತು ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.