ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ಆಧಾರ್ ಕಾರ್ಡ್ನಲ್ಲಿನ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳುವುದಕ್ಕೂ ತಾಲೂಕಿನ ಜನರು ಪರದಾಡುವಂತಾಗಿದೆ. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ನವೀಕರಿಸಲು ಸ್ಥಳೀಯವಾಗಿ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ರೈತರು, ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಸಮಯ ಮತ್ತು ಹಣ ವ್ಯಯಿಸುವಂತಾಗಿದ್ದು, ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ಆಧಾರ್ ಕಾರ್ಡ್ನಲ್ಲಿನ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳುವುದಕ್ಕೂ ತಾಲೂಕಿನ ಜನರು ಪರದಾಡುವಂತಾಗಿದೆ. ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ನವೀಕರಿಸಲು ಸ್ಥಳೀಯವಾಗಿ ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ಹಾಸನಕ್ಕೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ರೈತರು, ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಸಮಯ ಮತ್ತು ಹಣ ವ್ಯಯಿಸುವಂತಾಗಿದ್ದು, ತಾಲೂಕು ಆಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.ಪಡಿತರ ಚೀಟಿಯ ಇ-ಕೆವೈಸಿ ಪ್ರಕ್ರಿಯೆ, ಮಕ್ಕಳ ಆಧಾರ್ ನವೀಕರಣ ಹಾಗೂ ಇತರ ಸರ್ಕಾರಿ ಸೇವೆಗಳಿಗೆ ಆಧಾರ್ ದಾಖಲೆಗಳು ಅಗತ್ಯವಾಗಿವೆ. ಆದರೆ, ಅರಸೀಕೆರೆಯಲ್ಲಿ ಎಲ್ಲ ರೀತಿಯ ತಿದ್ದುಪಡಿಗಳಿಗೆ ಅನುಕೂಲವಾಗುವ ಕೇಂದ್ರಗಳ ಕೊರತೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಬ್ಯಾಂಕ್ಗಳಲ್ಲಿ ಆಧಾರ್ ತಿದ್ದುಪಡಿ ಸೇವೆ ಲಭ್ಯವಿಲ್ಲ ಎಂಬ ದೂರುಗಳಿದ್ದು, ಅಂಚೆ ಕಚೇರಿಗಳಲ್ಲಿಯೂ ಅಗತ್ಯ ಸೇವೆಗಳು ಸಿಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಬಾರಿ ಹಾಸನಕ್ಕೆ ತೆರಳಿದರೂ ತಿದ್ದುಪಡಿ ಕಾರ್ಯ ಪೂರ್ಣಗೊಳ್ಳದೆ ಮತ್ತೆ ಮತ್ತೆ ಅಲೆಯಬೇಕಾಗುತ್ತಿದೆ. ಇದರಿಂದ ಪ್ರಯಾಣದ ವೆಚ್ಚ ಹೆಚ್ಚುವುದರ ಜತೆಗೆ ದಿನಗೂಲಿ ಕೆಲಸ ಮಾಡುವವರು ತಮ್ಮ ಆದಾಯವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆಧಾರ್ ಸೇವೆಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ನೀಡುವ ವ್ಯವಸ್ಥೆಯೂ ಅಗತ್ಯವಾಗಿದೆ.ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವಂತೆ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ರೈತರ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷ ನಾಗೇನಹಳ್ಳಿ ದಯಾನಂದ್ ಅವರು ತಹಶೀಲ್ದಾರ್ ಸಂತೋಷ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಾಗೇನಹಳ್ಳಿ ದಯಾನಂದ್, ಆಧಾರ್ ತಿದ್ದುಪಡಿಯಂತಹ ಅಗತ್ಯ ಸೇವೆಗಳನ್ನು ಪಡೆಯಲು ಜನರು ಜಿಲ್ಲಾ ಕೇಂದ್ರಕ್ಕೆ ಅಲೆದಾಡಬೇಕಾಗಿರುವುದು ವಿಷಾದನೀಯ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ತಾಲೂಕಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಈ ವಿಚಾರದಲ್ಲಿ ಗಮನಹರಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಮಟ್ಟದಲ್ಲಿ ಸಾಧ್ಯವಾದಷ್ಟು ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಂಡರೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.ರೈತ ಸಂಘದ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಸಂತೋಷ್ ಕುಮಾರ್, ಆಧಾರ್ ತಿದ್ದುಪಡಿ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಕುರಿತು ಸಂಬಂಧಪಟ್ಟ ಬ್ಯಾಂಕ್ಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಕೆರೆಕೋಡಿಹಳ್ಳಿ ಲೋಕೇಶ್, ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.