ಸಾರಾಂಶ
ಕಾರವಾರ:
ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರದಾನ ಮಾಡಬೇಕಾಗಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಲ್ಲಿ ಪ್ರದಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ಆಕ್ಷೇಪಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ನೀಡಿರುವ ಅವರು 2023-24ನೇ ಸಾಲಿನ ಪಂಪ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ನಾ. ಡಿಸೋಜಾ ಅವರು ಆಯ್ಕೆ ಆಗಿರುವುದು ಸ್ವಾಗತಾರ್ಹ. ಅವರನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಭಿನಂದಿಸುತ್ತದೆ. ಆದರೆ ಈ ಪ್ರಶಸ್ತಿಯನ್ನು ಕದಂಬೋತ್ಸವದಲ್ಲಿ ಪ್ರದಾನ ಮಾಡದೇ ಬೆಂಗಳೂರಿನಲ್ಲಿ ಬೇರೆ ಯಾವುದೋ ಕಾರ್ಯಕ್ರಮದಲ್ಲಿ ನೀಡಿದ್ದು ಮಾತ್ರ ಸಮಂಜಸವಾದುದಲ್ಲ ಎಂದಿದ್ದಾರೆ.ಈ ಬಾರಿ ಮಾ. 5 ಮತ್ತು 6ರಂದು ಬನವಾಸಿಯಲ್ಲಿ ಕದಂಬೋತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ಪ್ರಶಸ್ತಿಯನ್ನು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರದಾನ ಮಾಡುತ್ತ ಬಂದಿರುವುದು ಈ ವರೆಗೂ ನಡೆದು ಬಂದಿರುವ ಪರಂಪರೆ. ಆದರೆ ಈ ವರ್ಷ ಮಾತ್ರ ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದ್ದಾರೆ. ಇದು ಯಾಕೆ ಎಂಬುದೇ ಪ್ರಶ್ನೆಯಾಗಿದೆ. ಹಾಗಿದ್ದರೆ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡುವುದಿಲ್ಲವೇ? ಪ್ರಶಸ್ತಿ ಪ್ರದಾನ ಮಾಡದೆ ಕದಂಬೋತ್ಸವ ಆಚರಿಸಿದರೆ ಕದಂಬೋತ್ಸವ ಸಮಗ್ರತೆ ಕಂಡುಕೊಳ್ಳಲು ಸಾಧ್ಯವೇ? ಪಂಪ ಪ್ರಶಸ್ತಿಯಿಲ್ಲದ ಕದಂಬೋತ್ಸವ ಅರ್ಥಪೂರ್ಣವಾದೀತೇ ಎಂದು ಅವರು ಪ್ರಶ್ನಿಸಿದ್ದಾರೆ.ಜಿಲ್ಲೆಯ ಸಾಹಿತಿಗೆ ಪಂಪ ಪ್ರಶಸ್ತಿ ಬರಬೇಕಿತ್ತು:ಉತ್ತರ ಕನ್ನಡ ಜಿಲ್ಲೆ ಪಂಪ ನಡೆದಾಡಿದ ನೆಲ. ಕನ್ನಡಿಗರ ಮೊದಲ ರಾಜಧಾನಿ ಬನವಾಸಿ ಕೂಡ ಉತ್ತರ ಕನ್ನಡದಲ್ಲಿದೆ. ಆದರೆ ಈ ವರೆಗೆ ಉತ್ತರ ಕನ್ನಡ ಜಿಲ್ಲೆಗೆ ಪಂಪ ಪ್ರತಿ ಸಿಕ್ಕಿದ್ದು ಕೇವಲ ಒಬ್ಬರಿಗೆ ಮಾತ್ರ. ಪ್ರಶಸ್ತಿಗೆ ಅರ್ಹರು ಜಿಲ್ಲೆಯಲ್ಲಿದ್ದಾರೆ. ಬರುವ ವರ್ಷಗಳಲ್ಲಾದರೂ ಕದಂಬೋತ್ಸವದ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಿರಿಯ ಸಾಹಿತಿಯೋರ್ವರನ್ನು ಗುರುತಿಸಿ ಪಂಪ ಪ್ರಶಸ್ತಿಗೆ ಆಯ್ಕೆ ಮಾಡುವಂತಾಗಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಒತ್ತಾಯಿಸಿದ್ದಾರೆ.