ಕರಪತ್ರ, ಪೋಸ್ಟರ್ ಮುದ್ರಣ: ನಿಯಮಾವಳಿ ಪಾಲಿಸಿ: ಜಿಲ್ಲಾಧಿಕಾರಿ

| Published : Apr 08 2024, 01:01 AM IST

ಸಾರಾಂಶ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಚುನಾವಣೆ ಪ್ರಚಾರದ ಕರಪತ್ರ, ಪೋಸ್ಟರ್ ಇತ್ಯಾದಿ ಮುದ್ರಿಸುವಾಗ ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕಟ್ಟುನಿಟ್ಟಾಗಿ ನಿಯಮಾವಳಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಚುನಾವಣೆ ಪ್ರಚಾರದ ಕರಪತ್ರ, ಪೋಸ್ಟರ್ ಇತ್ಯಾದಿ ಮುದ್ರಿಸುವಾಗ ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಕಟ್ಟುನಿಟ್ಟಾಗಿ ನಿಯಮಾವಳಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭ್ಯರ್ಥಿಗಳು ಅಥವಾ ಯಾವುದೇ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರದ ಕರಪತ್ರ ಅಥವಾ ಪೋಸ್ಟರ್ ಮುದ್ರಣಕ್ಕೆ ನೀಡುವ ಮುಂಚೆ ನಿಯಮಾನುಸಾರ ಭರ್ತಿ ಮಾಡಿದ ಅಪೆಂಡಿಕ್ಸ್ ಎ ನಮೂನೆ ಯನ್ನು ಪಡೆದುಕೊಳ್ಳಬೇಕು.ಮುದ್ರಿಸಿದ ಬಳಿಕ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಅಪೆಂಡಿಕ್ಸ್ ಬಿ ನಮೂನೆ ಭರ್ತಿ ಮಾಡಿ ಮುದ್ರಿತ ಕರಪತ್ರ ಅಥವಾ ಪೋಸ್ಟರ್ ಗಳೊಂದಿಗೆ ಸಲ್ಲಿಸಬೇಕು. ಪ್ರಕಾಶಕರ ಹೆಸರು, ಮುದ್ರಕರ ಹೆಸರು, ಮುದ್ರಣಾಲಯ ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ ಇತ್ಯಾದಿ ವಿವರವನ್ನು ಕಡ್ಡಾಯವಾಗಿ ಮುದ್ರಿಸಬೇಕು. ಮುದ್ರಿತ ಕರಪತ್ರ ಅಥವಾ ಪೋಸ್ಟರ್ ಪ್ರತಿಗಳ ಜತೆಗೆ ಅಪೆಂಡಿಕ್ಸ್ ಎ, ಬಿ ಹಾಗೂ ವೆಚ್ಚದ ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಕಾಶಕರು ದ್ವಿಪ್ರತಿಯಲ್ಲಿ ಮುದ್ರಕರಿಗೆ ಡಿಕ್ಲೇರೇಶನ್ ಸಲ್ಲಿಸಬೇಕು. ಕರಪತ್ರಗಳ ಮುದ್ರಣದ ಬಳಿಕ ಮುದ್ರಕರು ನಿಗದಿತ ಅಪೆಂಡಿಕ್ಸ್ ಎ ಮತ್ತು ಬಿ ನಮೂನೆಗಳಲ್ಲಿ ಭರ್ತಿಮಾಡಿ ಮುದ್ರಿತ ಪ್ರತಿಗಳೊಂದಿಗೆ ಸಲ್ಲಿಸಬೇಕು. ಯಾವುದೇ ರೀತಿಯ ಕಾನೂನುಬಾಹಿರ ವಿಷಯ ಮುದ್ರಿಸಬಾರದು. ಜಾತಿ, ಧರ್ಮ, ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ವಿಷಯಗಳನ್ನು ಯಾವುದೇ ಕಾರಣಕ್ಕೂ ಮುದ್ರಿಸಬಾರದು ಎಂದು ನಿರ್ದೇಶನ ನೀಡಿದರು.

ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಅಥವಾ ಗ್ರಾಮ‌ ಪಂಚಾಯತಿಯಿಂದ ಸೂಕ್ತ ಅನುಮತಿ ಪಡೆಯದೆ ಅನಧಿಕೃತವಾಗಿ ಬ್ಯಾನರ್ ಹಾಗೂ ಪೋಸ್ಟರ್ ಅಳವಡಿಸಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಕರಪತ್ರ, ಪೋಸ್ಟರ್ ಪೂರ್ವ ಪರಿಶೀಲನೆ:

ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳು ಪೋಸ್ಟರ್ ಅಥವಾ ಕರಪತ್ರಗಳನ್ನು ಮುದ್ರಣಕ್ಕೆ ನೀಡುವ ಮುಂಚೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ‌ ಹಾಗೂ ಕಣ್ಗಾವಲು ಘಟಕ(ಎಂಸಿಎಂಸಿ)ದಲ್ಲಿ ಪರಿಶೀಲನೆಗೆ ಸಲ್ಲಿಸಬೇಕು. ಎಂಸಿಎಂಸಿ‌ ಘಟಕದಲ್ಲಿ ಸದರಿ ಮಾಹಿತಿ ಪರಿಶೀಲಿಸಿ ಸಮರ್ಪಕವಾಗಿದೆ ಎಂದು ಪ್ರಮಾಣೀಕರಿಸಿದ ಬಳಿಕ ಅಪೆಂಡಿಕ್ಸ್ ಎ ಜತೆಗೆ ಮುದ್ರಣಾಲಯಕ್ಕೆ ಸಲ್ಲಿಸಬೇಕು ಎಂದು ಬನಶಂಕರಿ ತಿಳಿಸಿದರು.

ಕ್ಯಾಶ್ ರಿಲೀಸ್ ಕಮಿಟಿ ಸದಸ್ಯ ಕಾರ್ಯದರ್ಶಿ ಗೌರಿಶಂಕರ ಕಡೆಚೂರು, ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಘಟಕ(ಎಂಸಿಎಂಸಿ) ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಬೆಳಗಾವಿ ನಗರ ಸೇರಿದಂತೆ ವಿವಿಧ ತಾಲೂಕುಗಳ ಮುದ್ರಣಾಲಯದ ಮಾಲೀಕರು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.