ನವಲಗುಂದ:

ಬಡವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಮತ್ತು ಅವರು ಸ್ವಾವಲಂಬಿಯಾಗಿ ಜೀವನ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ತಿಳಿಸಿದರು.

ಶನಿವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ಜನರ ಜೀವನಮಟ್ಟ ಸುಧಾರಣೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಗೃಹಲಕ್ಷ್ಮೀ ಫಲಾನುಭವಿಗಳನ್ನು ವಿನಾಕಾರಣ ರದ್ದು ಮಾಡುತ್ತಿದ್ದು ಇದರಿಂದ ಬಡವರಿಗೆ ಅನ್ಯಾಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಈ ಯೋಜನೆಯಲ್ಲಿ ಶ್ರೀಮಂತರು ಇದ್ದರೆ ಅಂತಹವರನ್ನು ಗುರುತಿಸಿ ರದ್ದು ಮಾಡಿ. ಆದರೆ, ನಿಜವಾಗಿಯೂ ಅರ್ಹತೆ ಇದ್ದವರನ್ನು ಪರಿಶೀಲಿಸಿ ಫಲಾನುಭವಿಗಳನ್ನು ಉಳಿಸಿಕೊಳ್ಳುವ ಕೆಲಸವಾಗಲಿ ಎಂದರು.

ತಾಪಂ ಇಒ ಪಿ.ಆರ್. ಬಡೇಖಾನಾವರ, ಗ್ಯಾರಂಟಿ ಸಮಿತಿ ಸದಸ್ಯರಾದ ಕಲ್ಮೇಶ ತಲವಾಯಿ, ಈರಣ್ಣ ಅಂಗಡಿ ಸೇರಿ ಗ್ಯಾರಂಟಿಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.ಇಂದು ಮಹಿಳಾ ದಿನಾಚರಣೆ


ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಹುತೇಕ ಮಹಿಳಾ ಕೇಂದ್ರಿಕೃತವಾಗಿದ್ದು ಮಾ. 8ರಂದು ಬೆಳಗ್ಗೆ 11ಕ್ಕೆ ಮಹಿಳಾ ದಿನಾಚರಣೆ ಅಂಗವಾಗಿ ಯೋಜನೆಗಳ ಅರಿವು ಮೂಡಿಸುವ ಸಲುವಾಗಿ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಫಾಲಾನುಭವಿಗಳೊಂದಿಗೆ ಚರ್ಚೆ ಆಯೋಜಿಸಲಾಗಿದೆ. ಶಾಸಕ ಎನ್.ಎಚ್. ಕೋನರಡ್ಡಿ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ವರ್ಧಮಾನಗೌಡ ಹಿರೇಗೌಡ್ರ ಹಾಗೂ ತಾಪಂ ಇಒ ಪಿ.ಆರ್. ಬಡೇಖಾನಾವರ ತಿಳಿಸಿದರು.