ರಾಣಿಬೆನ್ನೂರು: ಪಂಚಪೀಠಗಳು ನಾಡಿನ ಎಲ್ಲಾ ವರ್ಗದ ಜನರಿಗೆ ಸಂಸ್ಕಾರ ನೀಡುತ್ತಾ ಬಂದಿವೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು. ತಾಲೂಕಿನ ಲಿಂಗದಹಳ್ಳಿ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ ಷಷ್ಟ್ಯಬ್ದ ಅಂಗವಾಗಿ ಶುಕ್ರವಾರ ನೂರೆಂಟು ಮಂಟಪ ಪೂಜಾ ಹಾಗೂ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗುರು ಸ್ಥಳದ ಮಠಗಳ ಅಭಿವೃದ್ಧಿಗೆ ಸ್ಥಳೀಯ ಜನರ ಸಹಕಾರ ಬೇಕು. ಕ್ರಿಯಾಶೀಲ ಮನುಷ್ಯ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ನಿರಂತರ ಶ್ರಮ ಮತ್ತು ಪ್ರಯತ್ನದಿಂದ ಗೆಲುವು ಹೊಂದಬಹುದು. ಮನುಷ್ಯ ಜೀವನದಲ್ಲಿ ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಸಮರ್ಪಿಸಿದಾಗ ಜೀವನ ಸಾರ್ಥಕವಾಗುತ್ತದೆ. ಸಂಪತ್ತು ಇರಲಿ, ಇಲ್ಲದೆ ಇರಲಿ, ಸತ್ಯವಾದ ಮಾರ್ಗದಲ್ಲಿ ನಡೆಯಬೇಕು. ಸಾಧನೆ ಇಲ್ಲದೆ ಸತ್ತರೆ ಬದುಕಿಗೆ ಅವಮಾನ. ನಿರಂತರ ಶ್ರಮದಿಂದ ಮಾತ್ರ ಶ್ರೇಷ್ಠ ಗುರಿ ಸಾಧಿಸಲು ಸಾಧ್ಯ. ಮಠ ಮಂದಿರಗಳು ಧರ್ಮ ಜಾಗೃತಿ ಸಂಕೇತವಾಗಿವೆ ಎಂದರು. ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಸ್ವಾಮಿಗಳು ಮಾತನಾಡಿ, ಮನುಷ್ಯನ ಬದುಕಿಗೆ ಆಯುಷ್ಯ ಬಹಳ ಮುಖ್ಯವಾಗಿದ್ದು ಆಯುಷ್ಯದ ಜೊತೆಗೆ ಆರೋಗ್ಯ ಚೆನ್ನಾಗಿರಬೇಕು. ಆಯುಷ್ಯ ಇದ್ದು ಆರೋಗ್ಯ ಇಲ್ಲವಾದರೆ ಆ ಬದುಕಿಗೆ ಅರ್ಥವಿಲ್ಲ. ನಮ್ಮಲ್ಲಿರುವ ಸದ್ಗುಣ ಸಹ ನಮಗೆ ದಿವ್ಯ ಔಷಧಿಯಾಗಿ ನಮ್ಮ ಆರೋಗ್ಯ ಕಾಪಾಡಿಕೊಂಡು ಬರುತ್ತದೆ. ಯಾರು ಸದ್ಗುಣ ಹೊಂದಿದ್ದಾರೆ ಅವರ ಆರೋಗ್ಯದಲ್ಲಿ ಏರುಪೇರು ಇರುವುದಿಲ್ಲ. ಯಾರಲ್ಲಿ ದುರ್ಗುಣವಿರುತ್ತದೆಯೋ ಅವರಿಗೆ ಬೇಗ ಮುಪ್ಪು ಬಂದು ಅಲ್ಪ ಆಯುಷ್ಯ ಹೊಂದುತ್ತಾರೆ. ಭಗವಂತ ಕೊಟ್ಟಿರುವ ಆಯುಷ್ಯವನ್ನು ಸಮಾಜದ ಸುಧಾರಣೆ ಮೀಸಲಿಡಬೇಕು ಎಂದರು.ನೇತೃತ್ವ ವಹಿಸಿದ ಲಿಂಗದಹಳ್ಳಿ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಗದ್ಗುರುಗಳ ಆಶೀರ್ವಾದದ ಬಲ ಮತ್ತು ಭಕ್ತರ ಸಹಕಾರದಿಂದ ಶ್ರೀ ಮಠದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಸಮಾರಂಭಕ್ಕೆ ಪಂಚ ಪೀಠಾಧೀಶರು ಆಗಮಿಸಿ ಆಶೀರ್ವದಿಸಿರುವುದು ತಮಗೆ ಹೆಚ್ಚಿನ ಬಲ ತಂದಿದೆ ಎಂದರು.ಮದ್ದಣಕಿ ಹಿರೇಮಠದ ಶಿವಯೋಗಿ ಶಿವಾಚಾರ್ಯರು, ಕುಣಿಗಲ್ ಯಡಿಯೂರಿನ ರೇಣುಕ ಶಿವಾಚಾರ್ಯರು, ಸಿಂದಗಿ ಸಾರಂಗಧರ ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯರು, ಆವರಗೊಳ್ಳದ ಓಂಕಾರ ಶಿವಾಚಾರ್ಯರು, ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಎಮ್ಮಿಗನೂರು ಸಾವಿರದೇವರಮಠದ ವಾಮದೇವ ಮಹಾಂತ ಶಿವಾಚಾರ್ಯರು, ಶಿವಗಂಗಾದ ಡಾ. ವಲಯಶಾಂತಮುನಿ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಎಸ್.ಎಸ್.ರಾಮಲಿಂಗಣ್ಣನವರ, ಸಂತೋಷಕುಮಾರ ಪಾಟೀಲ, ಎಂ.ಎಸ್. ಅರಕೇರಿ, ವಿ.ಎಸ್. ಹಿರೇಮಠ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಹನುಮಂತಪ್ಪ ಕಬ್ಬಾರ, ಮಹೇಶ ಪಾಟೀಲ ಮತ್ತಿತರರಿದ್ದರು. ಷಷ್ಟ್ಯಬ್ದ ಅಂಗವಾಗಿ ಬೆಳಗ್ಗೆ ವೀರಭದ್ರ ಶ್ರೀಗಳಿಗೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪಂಚಾಮೃತ ಮಂಗಲಸ್ನಾನ ಜರುಗಿತು. ಶ್ರೀ ಮಠದ ಆವರಣದಲ್ಲಿ ನಾಡಿನ ಹರ ಗುರು ಚರಮೂರ್ತಿಗಳ ನೂರೆಂಟು ಮಂಟಪ ಪೂಜಾ ವೈಭವದಿಂದ ಜರುಗಿತು. ಪ್ರತಿಯೊಬ್ಬ ಶ್ರೀಗಳಿಗೆ ಒಂದೊಂದು ಜೋಡಿ ದಂಪತಿಗಳು ಪಾದಪೂಜಾ ಮಾಡಿ ಫಲ ಪುಷ್ಪ ತಾಂಬೂಲ ಸಮರ್ಪಿಸಿ ಆಶೀರ್ವಾದ ಪಡೆದರು.ಪಂಚ ಪೀಠಗಳು ಎಲ್ಲಾ ವರ್ಗದ ಜನರಿಗೆ ಸಂಸ್ಕಾರ ನೀಡುತ್ತಾ ಬಂದಿವೆ: ರಂಭಾಪುರಿ ಸ್ವಾಮೀಜಿ
ಪಂಚಪೀಠಗಳು ನಾಡಿನ ಎಲ್ಲಾ ವರ್ಗದ ಜನರಿಗೆ ಸಂಸ್ಕಾರ ನೀಡುತ್ತಾ ಬಂದಿವೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.