ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಹಗಲು ರೈಲು ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕೆ ರಾತ್ರಿ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಕೆ ಮಾಡಿದ ಪರಿಣಾಮ ಪ್ರಯಾಣಿಕರಿಗೆ ಅನುಕೂಲವಾದರೂ ಪ್ರಯಾಣಕ್ಕೆ ಅನಾನುಕೂಲವಾಗಿ ಪರಿಣಮಿಸಿದ ವಿದ್ಯಮಾನ ಇದು.
ಇಂತಹ ಅನಾನುಕೂಲಕರ ಪರಿಸ್ಥಿತಿಯನ್ನು ಕಾರವಾರ-ಬೆಂಗಳೂರು-ಕಾರವಾರ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ಎದುರಿಸುತ್ತಿದ್ದಾರೆ. ಹೆಚ್ಚುವರಿ ಕೋಚ್ ಅಳವಡಿಕೆ ಆದಲ್ಲಿಂದ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ವಿಳಂಬ ಪ್ರಯಾಣ ಯಥಾಪ್ರಕಾರ ಮುಂದುವರಿದಿದೆ. ಇದು ಗಮ್ಯಸ್ಥಾನ ತಲುಪುವ ಪ್ರಯಾಣಿಕರಿಗೂ ಭಾರಿ ತೊಂದರೆಯಾಗಿದೆ. ಪ್ರತಿದಿನ ಸರಾಸರಿ ಒಂದು ಗಂಟೆ ವಿಳಂಬವಾಗುತ್ತಿದೆ ಎಂಬುದು ಪ್ರಯಾಣಿಕರ ಆರೋಪ.ಮಂಗಳೂರು-ಹಾಸನ ರೈಲು ಮಾರ್ಗದ ಸುಬ್ರಹ್ಮಣ್ಯ ಮಾರ್ಗ-ಎಡಕುಮೇರಿ ನಡುವೆ ಪ್ರಸಕ್ತ ರೈಲು ಮಾರ್ಗದ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾರವಾರ-ಯಶವಂತಪುರ ಹಗಲು ರೈಲು ಸಂಚಾರ ರದ್ದುಗೊಳಿಸಲಾಗಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ. ಪ್ರಸಕ್ತ ರಾತ್ರಿ ಮೂರು ರೈಲುಗಳು ಬೆಂಗಳೂರಿಗೆ ಸಂಚರಿಸುತ್ತಿವೆ. ಮುರುಡೇಶ್ವರ ಎಕ್ಸ್‌ಪ್ರೆಸ್, ಕಣ್ಣೂರು-ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಹಾಗೂ ಪಡೀಲು ಮೂಲಕ ನೇರ ಸಂಚರಿಸುತ್ತಿರುವ ಪಂಚಗಂಗಾ ಎಕ್ಸ್‌ಪ್ರೆಸ್ ರೈಲು. ಈ ಪೈಕಿ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ 5 ಹೆಚ್ಚುವರಿ ಕೋಚ್ ಅಳವಡಿಸಿದ್ದು, ಇದೇ ಕಾರಣದಿಂದ ಈ ರೈಲು ಗಮ್ಯಸ್ಥಾನ ತಲಪುವಾಗ ಭಾರಿ ವಿಳಂಬವಾಗುತ್ತಿದೆ ಎನ್ನುವುದು ಸಾರ್ವತ್ರಿಕ ಆರೋಪ.
ಕ್ರಾಸಿಂಗ್ ಸಮಸ್ಯೆ:ಈ ಹಿಂದೆ 14 ಕೋಚ್‌ಗಳಲ್ಲಿ ಸಂಚರಿಸುತ್ತಿದ್ದ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಈ ಹೆಚ್ಚುವರಿ 5 ಕೋಚ್ ಅಳವಡಿಸಿದ್ದರಿಂದ ಘಾಟ್ ಪ್ರದೇಶದ ಸಿರಿಬಾಗಿಲಿನಲ್ಲಿ ಮಾಮೂಲಿನಂತೆ ಇನ್ನೊಂದು ರೈಲಿಗೆ ಕ್ರಾಸಿಂಗ್ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲಿಗೆ ಕ್ರಾಸಿಂಗ್ ನೀಡಬೇಕಾಗುತ್ತದೆ. ಇದಕ್ಕಾಗಿ ಕೆಲವು ಹೊತ್ತು ರೈಲು ನಿಲುಗಡೆಯಾಗುತ್ತದೆ. ಬೆಂಗಳೂರಿನಿಂದ ಆಗಮಿಸುವಾಗ ಹಾಗೂ ಬೆಂಗಳೂರಿಗೆ ತೆರಳುವ ಇದೇ ಕಾರಣಕ್ಕೆ ಪಂಚಗಂಗಾ ರೈಲು ತುಂಬ ಹೊತ್ತು ನಿಲುಗಡೆ ಮಾಡುವುದು ಗಮ್ಯ ಸ್ಥಾನ ತಲುಪುವಲ್ಲಿ ವಿಳಂಬಕ್ಕೆ ಕಾರಣ ಎನ್ನುವುದು ಪ್ರಯಾಣಿಕರ ಅಳಲು.
..............ಅರೆಬೆಟ್ಟ ಕ್ರಾಸಿಂಗ್ ಬೇಡಿಕೆ ಮುನ್ನೆಲೆಗೆಎಡಕುಮೇರಿ-ಸಿರಿಬಾಗಿಲು ನಡುವೆ ಅರೆಬೆಟ್ಟ ಎಂಬಲ್ಲಿ ಹೊಸದಾಗಿ ಕ್ರಾಸಿಂಗ್ ನಿರ್ಮಿಸಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಘಾಟ್ ಪ್ರದೇಶದಲ್ಲಿ ರೈಲು ಕ್ರಾಸಿಂಗ್‌ಗೆ ಈಗ ಸಿರಿಬಾಗಿಲಿನಲ್ಲಿ ಮಾತ್ರ ವ್ಯವಸ್ಥೆ ಇದೆ. ನಂತರ ಸುಬ್ರಹ್ಮಣ್ಯ ಮಾರ್ಗ ಇರುವುದು. ಹಾಗಾಗಿ ಈ ಎರಡು ಪ್ರದೇಶ ಹೊರತುಪಡಿಸಿ ಇನ್ನೊಂದು ಕಡೆಯಲ್ಲಿ ಕ್ರಾಸಿಂಗ್ ಸೌಲಭ್ಯ ಕಲ್ಪಿಸುವಂತೆ ಅನೇಕ ಸಮಯದಿಂದ ಒತ್ತಾಯ ಕೇಳಿಬರುತ್ತಿದೆ. ಈ ಬಾರಿಯಾದರೂ ಅರೆಬೆಟ್ಟದಲ್ಲಿ ಕ್ರಾಸಿಂಗ್ ಸೌಲಭ್ಯ ಏರ್ಪಡಿಸಿದರೆ ಬೆಂಗಳೂರು ನಡುವಿನ ರೈಲು ಪ್ರಯಾಣದಲ್ಲಿ ವಿಳಂಬವಾಗುವುದನ್ನು ತಪ್ಪಿಸಬಹುದಾಗಿದೆ ಎನ್ನುವುದು ರೈಲ್ವೆ ಬಳಕೆದಾರರ ಸಂಘಟನೆಗಳ ಸಲಹೆ. .................ಪಂಚಗಂಗಾ ಎಕ್ಸ್‌ಪ್ರೆಸ್ ರೈಲು ಹೆಚ್ಚುವರಿ ಕೋಚ್ ಅಳವಡಿಸಿದ ಬಳಿಕ ಕ್ರಾಸಿಂಗ್ ಕಾರಣಕ್ಕೆ ಗಮ್ಯ ಸ್ಥಾನ ತಲುಪುವಲ್ಲಿ ವಿಳಂಬವಾಗುತ್ತಿದೆ. ಹೆಚ್ಚುವರಿ ಕೋಚ್‌ನಿಂದ ಪ್ರಯಾಣಿಕರಿಗೆ ಪ್ರಯೋಜನವಾಗಿದೆ, ಆದರೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಬೆಂಗಳೂರು ತಲುಪುವಾಗ ನಿಗದಿತ ಬೆಳಗ್ಗೆ 7 ಗಂಟೆ ಬದಲು 8 ಗಂಟೆ ಕಳೆದರೆ ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳುವವರಿಗೂ ಅನಾನುಕೂಲವಾಗುತ್ತದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಬೇಕು.-ಶ್ರೇಯಾ ಪುತ್ತೂರು, ಉದ್ಯೋಗಿ.
......................ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಕೋಚ್ ಅಳವಡಿಸಿರುವುದು ಶ್ಲಾಘನೀಯ. ಅದೇ ರೀತಿ ಅರೆಬೆಟ್ಟದಲ್ಲಿ ಇನ್ನೊಂದು ಕ್ರಾಸಿಂಗ್ ನಿರ್ಮಿಸಬೇಕಾದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಅಧಿಕಾರಿಗಳನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರೈಲ್ವೆ ಹೋರಾಟ ಸಮಿತಿ ಭೇಟಿ ಮಾಡಿ ಒತ್ತಾಯಿಸಲಿದೆ. ಅಲ್ಲದೆ ಹಾಸನದಿಂದ ಸಕಲೇಶಪುರ ನಡುವೆ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ವೇಗ ಮಿತಿ ಹೆಚ್ಚಳ ಮಾಡಿದರೆ ಕ್ರಾಸಿಂಗ್‌ನಲ್ಲಿ ಆದ ವಿಳಂಬವನ್ನು ಸ್ವಲ್ಪ ಪ್ರಮಾಣದಲ್ಲಿ ಸರಿದೂಗಿಸಲು ಸಾಧ್ಯ.
-ಗಣೇಶ್ ಪುತ್ರನ್, ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ