- ಪಂಚಗ್ಯಾರಂಟಿ ಯೋಜನೆಗಳ ಲೋಪ ಸರಿಪಡಿಸಲು ಕ್ರಮ ವಹಿಸಿ

-

-ಯೋಜನೆಗಳ ಲೋಪ ಸರಿಪಡಿಸಲು ಕ್ರಮವಹಿಸುವಂತೆ ಸೂಚನೆ । ಅನುಷ್ಠಾನ ಸಮಿತಿ ತಾಲೂಕ ಅಧ್ಯಕ್ಷ ಶ್ರೀ ಕೃಷ್ಣಪ್ಪಗೌಡ ಆಲ್ದಾಳ ಮಾಹಿತಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಆದರೆ, ಯೋಜನೆಯ ಸೌಲಭ್ಯ ಪಡೆಯುವಲ್ಲಿ ಇರುವ ಸಣ್ಣ-ಪುಟ್ಟ ತೊಡಕುಗಳನ್ನು ಸರಿಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕ ಸಮಿತಿ ಅಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ ಅವರು ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.


ಶಹಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕುಮಟ್ಟದ ಪ್ರಗತಿ ಪರಿಶೀಲನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿದ್ದು, ಲೋಪಗಳು ಇದ್ದರೆ ಸರಿಪಡಿಸಿ ಯೋಜನೆಯ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಲಾಗಿದೆ ಎಂದರು.

ಅರ್ಹ ಫಲಾನುಭವಿಗಳಿಗೆ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯ ಕಲ್ಪಿಸುವ ಹಿನ್ನಲೆಯಲ್ಲಿ ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಗಳಡಿ ನೋಂದಣಿಯಾದ ಫಲಾನುಭವಿಗಳನ್ನು ಗ್ಯಾರಂಟಿ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಂದ ಮರು ಪರಿಶೀಲಿಸುವ ಕಾರ್ಯ ಕೊನೆಯ ಹಂತದಲ್ಲಿದೆ ಎಂದು ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ರೈತರ ಹಲವು ಬೋರ್‌ವೆಲ್‌ಗಳಿಗೆ ಎರಡು ಮೂರು ವರ್ಷಗಳಿಂದಲೂ ವಿದ್ಯುತ್ ಪರಿವರ್ತಕ ಅಳವಡಿಕೆಯಾಗದೆ ಬಾಕಿ ಉಳಿದಿದ್ದು, ಫಲಾನುಭವಿಗಳು ತೊಂದರೆ ಅನುಭವಿಸುತ್ತಿರುವ ಕುರಿತು ಗ್ಯಾರಂಟಿ ಸಮಿತಿ ಸದಸ್ಯ ರಮೇಶ್ ಗುರಿಕಾರ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು

ವಿದ್ಯುತ್ ಪೂರೈಕೆ ಬಾಕಿ ಇರುವ ಬೋರ್‌ವೆಲ್‌ಗಳಿಗೆ ಆದ್ಯತೆಯ ಮೇರೆಗೆ ಶೀಘ್ರ ವಿದ್ಯುತ್ ಪರಿವರ್ತಕ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮವಹಿಸಬೇಕು. ಸರ್ಕಾರದ ಯೋಜನೆಗಳ ಸಂಪೂರ್ಣ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಭೂತಿಹಳ್ಳಿ ಗ್ರಾಮದಲ್ಲಿನ ಕೆಲವು ಮನೆಗಳಿಗೆ ವಿದ್ಯುತ್ ಪೂರೈಕೆ ಇಲ್ಲ, ಆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 6ರಿಂದ 7 ವಿದ್ಯುತ್ ಕಂಬಗಳ ಅಗತ್ಯವಿದೆ ಎಂದು ಗ್ಯಾರಂಟಿ ಸಮಿತಿ ಸದಸ್ಯ ಮಲ್ಲಣ್ಣಗೌಡ ತಿಪ್ಪನಹಳ್ಳಿ ಆಗ್ರಹಿಸಿದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ಒದಗಿಸಿದ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸಮಿತಿಯ ಸದಸ್ಯರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೂಗುಚ್ಚ ನೀಡಿ, ಅಭಿನಂದಿಸಿದರು.

ಶಹಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಬಸವರಾಜ ಶರಭೈ, ಸಮಿತಿ ಸದಸ್ಯರಾದ ಶರಣಗೌಡ ಮಾಲಿ ಪಾಟೀಲ ಅಣಬಿ, ಮಲ್ಲಣ್ಣಗೌಡ ತಿಪ್ಪನಹಳ್ಳಿ, ರಮೇಶ ಗುರಿಕಾರ, ರಾಯಪ್ಪ ಗಂಗನಾಳ, ಚನ್ನಬಸಪ್ಪ ಜಾಯಿ, ಬಸವರಾಜ ಕಂದಳ್ಳಿ, ತಾಯಮ್ಮ ಶ್ರೀಕಾಂತ, ಬಸಣ್ಣ ಮಲ್ಲಯ್ಯ ಭಂಗಿ, ಸಿದ್ದಣ್ಣ ದೇಸಾಯಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಯ ಅಧಿಕಾರಿಗಳು ಇದ್ದರು.

--ಫೋಟೊ----

7ವೈಡಿಆರ್2

ಶಹಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ತಾಲೂಕ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣಪ್ಪಗೌಡ ಆಲ್ದಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

---000---