ಸಾರಾಂಶ
ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಸೆಪ್ಟಂಬರ್ ೭ರಂದು ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ೬ ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕೊನೆಯ ದಿನ ಗುರುವಾರ ಮಧ್ಯಾಹ್ನ ಬೃಹತ್ ಶೋಭಾಯಾತ್ರೆಯು ಪ್ರಾರಂಭವಾಯಿತು. ಶ್ರೀಕೃಷ್ಣನ ಬೃಹತ್ ಪ್ರತಿಮೆ, ಶ್ರೀರಾಮನ ವಿಗ್ರಹ, ಶ್ರೀ ಮಾರುತಿ ವೇಶದಾರಿಗಳು, ಗೋವುಗಳು, ಬ್ಯಾಂಡ್ ಸೆಟ್, ವಾದ್ಯಗೋಷ್ಠಿ, ಕೇಸರಿ ಬಾವುಟದ ಪ್ರದರ್ಶನ ಆಕರ್ಷಣೆ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಚ್ಚು ಶಬ್ಧ ಭರಿಸುವ ಡಿಜೆ ಸ್ಪೀಕರ್‌ಗಳಲ್ಲಿ ಹಾಡುಗಳು ಕೇಳಿಬಂದಿತು. ಇದಕ್ಕೆ ಪುರುಷರು ಮತ್ತು ಮಹಿಳೆಯರು ಹೆಜ್ಜೆ ಹಾಕಿ ಗಮನ ಸೆಳೆದರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರತಿವರ್ಷದಂತೆ ಈ ವರ್ಷವೂ ಕೂಡ ಪಾಂಚಜನ್ಯ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ಗುರುವಾರ ಬೃಹತ್ ಶೋಭಾಯಾತ್ರೆ ನಡೆದು, ಡಿಜೆ ಸದ್ದಿನ ಘರ್ಜನೆಗೆ ಯುವಕ ಯುವತಿಯರು ಕುಣಿದು ಕುಪ್ಪಳಿಸಿದರು. ಇನ್ನು ಎರಡು ಬೃಹತ್ ಆಂಜನೇಯ ವೇಷಧಾರಿಗಳು ಡಿಜೆ ಸದ್ದಿಗೆ ನೃತ್ಯ ಮಾಡಿ ಗಮನ ಸೆಳೆದರು. ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಸೆಪ್ಟಂಬರ್ ೭ರಂದು ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ೬ ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕೊನೆಯ ದಿನ ಗುರುವಾರ ಮಧ್ಯಾಹ್ನ ಬೃಹತ್ ಶೋಭಾಯಾತ್ರೆಯು ಪ್ರಾರಂಭವಾಯಿತು. ಶ್ರೀಕೃಷ್ಣನ ಬೃಹತ್ ಪ್ರತಿಮೆ, ಶ್ರೀರಾಮನ ವಿಗ್ರಹ, ಶ್ರೀ ಮಾರುತಿ ವೇಶದಾರಿಗಳು, ಗೋವುಗಳು, ಬ್ಯಾಂಡ್ ಸೆಟ್, ವಾದ್ಯಗೋಷ್ಠಿ, ಕೇಸರಿ ಬಾವುಟದ ಪ್ರದರ್ಶನ ಆಕರ್ಷಣೆ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಚ್ಚು ಶಬ್ಧ ಭರಿಸುವ ಡಿಜೆ ಸ್ಪೀಕರ್‌ಗಳಲ್ಲಿ ಹಾಡುಗಳು ಕೇಳಿಬಂದಿತು. ಇದಕ್ಕೆ ಪುರುಷರು ಮತ್ತು ಮಹಿಳೆಯರು ಹೆಜ್ಜೆ ಹಾಕಿ ಗಮನ ಸೆಳೆದರು.ಹೊಸಲೈನ್ ಮಸೀದಿ ಬಳಿ ಬರುತ್ತಿದ್ದಂತೆ ಮಸೀದಿ ಗೇಟಿಗೆ ಅಡ್ಡದಾಗಿ ಪೊಲೀಸ್ ಬಸ್ ನಿಲ್ಲಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನಗರದ ಅರಳೆಪೇಟೆ ರಸ್ತೆಯಲ್ಲಿ ಶೋಭಾಯಾತ್ರೆ ಹೋಗುತ್ತಿದ್ದಾಗ ಎಎಸ್ಪಿ ತಮ್ಮಯ್ಯ ಅವರು ಬೇಗ ಬೇಗನೆ ಹೋಗುವಂತೆ ಸೂಚಿಸಿದಾಗ ಕೆಲ ಸಮಯ ಕಾರ್ಯಕರ್ತರೊಡನೆ ವಾಗ್ವಾದ ನಡೆಯಿತು. ನಂತರ ಶಾಂತ ರೀತಿಯಲ್ಲಿ ಸಂಚರಿಸಿದರು. ಇನ್ನು ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಬಂಕ್ ಹೊಡೆದು ಪಾಂಚಜನ್ಯ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಸಮಾಜವನ್ನು ಒಗ್ಗೂಡಿಸಿ ಹಾಸನ ಜಿಲ್ಲೆಯ ಸಾಮರಸ್ಯಕ್ಕೆ ಹೆಸರಾಗಿರುವ ಪಾಂಚಜನ್ಯ ಗಣಪತಿಯ ಶೋಭಾಯಾತ್ರೆಗೆ ಅಧಿಕೃತವಾಗಿ ಚಾಲನೆ ದೊರಕಿದೆ. ಅನೇಕ ಸಮಾಜ ಸೇವಕರು, ಜನಪ್ರತಿನಿಧಿಗಳು ಸೇರಿದಂತೆ ಅನೇಕ ಪಕ್ಷದ ಮುಖಂಡರು ಎಲ್ಲಾ ಭಾಗಿಯಾಗಿದ್ದಾರೆ. ಶಾಸಕರಾದ ಸಿಮೆಂಟ್ ಮಂಜಣ್ಣ, ಶಾಸಕ ಎಚ್.ಕೆ. ಸುರೇಶ್, ಲೋಕಸಭಾ ಸದಸ್ಯರಾದ ಶ್ರೇಯಸ್ ಪಟೇಲ್, ಬಿಜೆಪಿ ಪಕ್ಷದ ಸಿದ್ದೇಶ್ ನಾಗೇಂದ್ರ ಭಾಗವಹಿಸಿದ್ದಾರೆ. ಪಕ್ಷವನ್ನು ಮೀರಿ, ಸಮಾಜವನ್ನು ಒಗ್ಗೂಡಿಸಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವಂತಹ ಈ ಕಾರ್ಯದಲ್ಲಿ ಇಡೀ ಸಮಾಜ ಒಂದಾಗಿ ಶೋಭಾಯಾತ್ರೆಯಲ್ಲಿ ಒಂದಾಗುತ್ತಿದೆ ಎಂದರು. ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪಾಂಚಜನ್ಯ ಗಣಪತಿ ವಿಸರ್ಜನೆ ಆಗುತ್ತಿದ್ದು, ಹಿಂದೂ ಬಾಂಧವರಿಗೆ ಇಡೀ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಎಂದರೆ ತಪ್ಪಾಗಲಾರದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಶೋಭಾಯಾತ್ರೆಯಲ್ಲಿ ಸೇರಿದ್ದಾರೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ. ಹಿಂದೂಗಳಲ್ಲಿ ಸ್ವಾಭಿಮಾನ ಮತ್ತು ಒಗ್ಗಟ್ಟು ಮೂಡಿಸಲಿ ಎಂದು ಹಾರೈಸಿದರು. ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಅಧ್ಯಕ್ಷ ವಾಸು, ಕಾರ್ಯದರ್ಶಿ ವೇಣುಗೋಪಾಲ್ ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ರವಿಸೋಮು, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್, ರಕ್ಷಿತ್ ಭಾರಧ್ವಜ್, ಆರ್‌ಎಸ್ಎಸ್ ಮುಖಂಡ ಮೋಹನ್, ಶೋಭನ್ ಬಾಬು, ವಿಶಾಲ್ ಅಗರವಾಲ್, ಮೋಹನ್, ಅವಿನಾಶ್ ಇತರರು ಇದ್ದರು.