ವಿಶ್ವದ ಶಾಂತಿಗಾಗಿ ಪಂಚಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ಹಿಂದೆ ಸಮಾಜ, ಗ್ರಾಮ ಮಾತ್ರವಲ್ಲದೇ ಪರಿಸರ ಸೇರಿದಂತೆ ವಿಶ್ವದ ಎಲ್ಲರಿಗೂ ಒಳಿತು ಬಯಸುವ ಉದ್ದೇಶವಿದೆ ಎಂದು ಆಚಾರ್ಯ ಗುಣಧರನಂದಿ ಮಹರಾಜರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ವಿಶ್ವದ ಶಾಂತಿಗಾಗಿ ಪಂಚಕಲ್ಯಾಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದರ ಹಿಂದೆ ಸಮಾಜ, ಗ್ರಾಮ ಮಾತ್ರವಲ್ಲದೇ ಪರಿಸರ ಸೇರಿದಂತೆ ವಿಶ್ವದ ಎಲ್ಲರಿಗೂ ಒಳಿತು ಬಯಸುವ ಉದ್ದೇಶವಿದೆ ಎಂದು ಆಚಾರ್ಯ ಗುಣಧರನಂದಿ ಮಹರಾಜರು ತಿಳಿಸಿದರು. ತಾಲೂಕಿನ ಆಲಗೂರು ಗ್ರಾಮದ ಜೈನ ಬಸದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ.23ರಿಂದ 9 ದಿನಗಳ ಕಾಲ ಉತ್ಸವ ನಡೆಯಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಸೇರಿದಂತೆ ಅನೇಕ ಸಚಿವರು, ಶಾಸಕರು, ವಿವಿಧ ಸಮಾಜಗಳ ಮುಖಂಡರು, ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭಗವಾನರ ಆದಿನಾಥ ತೀರ್ಥಂಕರರು ಹಾಗೂ ಭಗವಾನ ಭರತೇಶ್ವರ ವಿಗ್ರಹಗಳ ಪ್ರತಿಷ್ಠಾಪನೆ, ಧ್ವಜಾರೋಹಣ, ಇಂದ್ರಸಭೆ, ಗರ್ಭಕಲ್ಯಾಣ, ಜನ್ಮಕಲ್ಯಾಣ, ರಾಜ್ಯಾಭಿಷೇಕ, ದೀಕ್ಷಾ ಕಲ್ಯಾಣ, ಕೇವಲ ಜ್ಞಾನ ಕಲ್ಯಾಣ, ನಿರ್ವಾಣ ಕಲ್ಯಾಣ ಹಾಗೂ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು 9 ದಿನಗಳ ಪರ್ಯಂತರ ನಡೆಯಲಿವೆ ಎಂದು ವಿವರಿಸಿದರು.

ಒಬ್ಬ ತೀರ್ಥಕರರಿಗೆ ಪಂಚ ಕಲ್ಯಾಣಗಳು, 33 ಪದಾರ್ಥಗಳ ಮಹಾಮಸ್ಥಕಾಭಿಷೇಕ ನಡೆಯಲಿದೆ. ಸತ್ಯ, ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅನೇಕಾಂತವಾದ ಹೀಗೆ ಆರು ತತ್ವಗಳನ್ನು ಭಗವಾನ ಆದಿನಾಥ ತೀರ್ಥಂಕರರು, ವೃಷಭ ದೇವರು ಬೋಧಿಸಿದ್ದಾರೆ. ವಿಶ್ವದ ಶಾಂತಿಗಾಗಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು. ಕಾರ್ಯಕ್ರಮದಲ್ಲಿ 50 ಸಾವಿರದಿಂದ 1 ಲಕ್ಷ ಜನರು ಸೇರು ನಿರೀಕ್ಷೆ ಇದೆ. ಪಂಚ ಪಕ್ವಾನ್ನ ಪ್ರಸಾದ ಜೊತೆಗೆ ತ್ರಿವಿಧ ದಾಸೋಹ ನಡೆಯಲಿದೆ ಎಂದು ತಿಳಿಸಿದರು.

ಗುಲ್ಬರ್ಗಾದ ಕಲ್ಯಾಣ ಸಾಗರ ಮಹಾರಾಜರು, ಮುಖಂಡರಾದ ವರ್ಧಮಾನ ನ್ಯಾಮಗೌಡ, ಸಿ.ಟಿ. ಉಪಾಧ್ಯಾಯ, ಅಣ್ಣೇಶ ಪರಮಗೊಂಡ, ಶ್ರೀಮಂತ ಖಿದ್ರಾಪುರ, ಶೀತಲ ಮಗದುಮ್‌, ಬಾಹುಬಲಿ ಯಲಗುದ್ರಿ, ಚಂದು ನರಸಗೊಂಡ, ಭರತೇಶ ಖಿದ್ರಾಪುರ, ಮಲ್ಲಪ್ಪ ಪರಮಗೊಂಡ, ಧರೆಪ್ಪ ನರಸಗೊಂಡ, ಪರಪ್ಪ ತೊನಶ್ಯಾಳ ಮುಂತಾದವರಿದ್ದರು. ಅಬಕಾರಿ ಇಲಾಖೆ ಅಧಿಕಾರಿ ಆದಿನಾಥ ನರಸಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು.