ಪಂಚಾಕ್ಷರ ಗವಾಯಿಗಳು ಅಂಧತ್ವ ಮೆಟ್ಟಿ ನಿಂತ ಸಾಧಕರು: ಜಿ.ಟಿ.ನಂದೀಶ್‌

| Published : Feb 06 2024, 01:36 AM IST

ಪಂಚಾಕ್ಷರ ಗವಾಯಿಗಳು ಅಂಧತ್ವ ಮೆಟ್ಟಿ ನಿಂತ ಸಾಧಕರು: ಜಿ.ಟಿ.ನಂದೀಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಗವಾಯಿಗಳ ನಡೆಯಿಂದಾಗಿಯೇ ಕರ್ನಾಟಕದಲ್ಲಿ ಗದುಗಿಗೆ ವಿಶೇಷ ಮನ್ನಣೆ ದೊರೆತು, ಸಂಗೀತದ ತವರು ಎನಿಸಿತು. ಅಂಥ ಗವಾಯಿಗಳ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಸ್ಥಾಪಿಸಿರುವುದು ಅವರ ಅನುಪಮ ಸೇವೆಗೆ ಸಂದ ಗೌರವ ಎಂದೇ ಹೇಳಬೇಕು ಎಂದು ನಂದೀಶ್ ಬಣ್ಣಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಅಂಧತ್ವ ಎನ್ನುವ ಕೀಳರಿಮೆಯಿಂದ ಹೊರಬಂದು ಅದನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಅಂತಹವರದೇ ಬಾಳಿಗೆ ಬೆಳಕು ನೀಡಿದವರು ಗದುಗಿನ ಗಾನಯೋಗಿ ಪಂಚಾಕ್ಷರ ಗವಾಯಿಗಳವರು ಎಂದು ನಿವೃತ್ತ ಕನ್ನಡ ಉಪನ್ಯಾಸಕ ಜಿ.ಟಿ. ನಂದೀಶ್ ಅವರು ಅಭಿಪ್ರಾಯಪಟ್ಟರು.

ಅವರು ಸ್ಥಳೀಯ ಗಾನಯೋಗಿ ಸಂಗೀತ ಬಳಗದ ವತಿಯಿಂದ ನಗರದ ಕೆಎಸ್ಎಫ್ ಸಿ.ಬಳಿಯ ಶ್ರೀಶೈಲ ಎಂಟರ್ಪ್ರೈಸಸ್ ಆವರಣದಲ್ಲಿ ಆಯೋಜಿಸಿದ್ದ ಪಂಚಾಕ್ಷರ ಗವಾಯಿಗಳವರ 132ನೇ ಜಯಂತಿಯಲ್ಲಿ ಗವಾಯಿಗಳವರ ಸಾಧನೆಯ ವ್ಯಕ್ತಿತ್ವ ಕುರಿತು ಮಾತನಾಡಿದ ಅವರು ಜೀವನದಲ್ಲಿ ಪರಿಶ್ರಮಪಟ್ಟು ಸಂಗೀತ ಸಾಧನೆ ಮಾಡಿದ ಗವಾಯಿಗಳು ಸಂಗೀತ ಸಾಧಕರಿಗಾಗಿ ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪಿಸಿ ಆ ಮೂಲಕ ಸಂಗೀತಾಭ್ಯಾಸಿಗಳ ಕಲಿಕೆ ಮತ್ತು ಅನುಕೂಲಕ್ಕಾಗಿ ಅನುವು ಮಾಡಿಕೊಟ್ಟರು ಎಂದರು.

ಗವಾಯಿಗಳ ನಡೆಯಿಂದಾಗಿಯೇ ಕರ್ನಾಟಕದಲ್ಲಿ ಗದುಗಿಗೆ ವಿಶೇಷ ಮನ್ನಣೆ ದೊರೆತು, ಸಂಗೀತದ ತವರು ಎನಿಸಿತು. ಗವಾಯಿಗಳು ಎಷ್ಟು ಮೃದು ಸ್ವಭಾವದವರೋ ಅಷ್ಟೇ ಸ್ವಾಭಿಮಾನಿ ಮತ್ತು ಭಾಷಾ ಪ್ರೇಮಿಯೂ ಆಗಿದ್ದರು ಎನ್ನುವುದಕ್ಕೆ ಅವರು ಕೈಗೊಂಡ ನಿರ್ಧಾರಗಳೇ ಸಾಕ್ಷಿ. ಅಂತಹ ಮಹನೀಯರ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ಸ್ಥಾಪಿಸಿ ರುವುದು ಅವರ ಅನುಪಮ ಸೇವೆಗೆ ಸಂದ ಗೌರವ ಎಂದೇ ಹೇಳಬೇಕು ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಸಂಗೀತ ಶಿಕ್ಷಕರಾದ ಹೊನ್ನಪ್ಪ, ವಿದುಷಿ ಸ್ವರ್ಣ ಜಗನ್ನಾಥ್ ಹಾಗೂ ಆಯುರ್ವೇದ ತಜ್ಞ ವೈದ್ಯ ನವೀನ್ ಬಿ .ಸಜ್ಜನ್ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ.ನವೀನ್ ಬಿ ಸಜ್ಜನ್, ನಾನು ಸಹ ಗದುಗಿನಲ್ಲಿ ಕೆಲವಾರು ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದೆ. ನಂತರ ವೈದ್ಯ ಪದವಿ ಪಡೆದೆ. ಸಂಗೀತ ಹವ್ಯಾಸ ಇರುವ ಕಾರಣ ಬಳಗದಲ್ಲಿ ಕಾರ್ಯಕರ್ತನಾಗಿ ಹೃತ್ಪೂರ್ವಕವಾಗಿ ಕಾರ್ಯನಿರ್ವಹಿಸುತ್ತಿರುವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಮತಾ ಮಾತನಾಡಿ ಅಂಧತ್ವ ಮೆಟ್ಟಿ ನಿಂತು ಸತತ ಸಾಧನೆಯ ಮೂಲಕ ಔನ್ನತ್ಯ ಏರಬಹುದು ಎನ್ನುವುದನ್ನು ಕನ್ನಡ ನಾಡಿನಲ್ಲಿ ಪಂಚಾಕ್ಷರ ಗವಾಯಿ ಮತ್ತು ಅವರ ಶಿಷ್ಯಂದಿರಾದ ಪುಟ್ಟರಾಜ ಗವಾಯಿಗಳು ತೋರಿಸಿಕೊಟ್ಟಿದ್ದಾರೆ ಎಂದರು. ಗಾನಯೋಗಿ ಸಂಗೀತ ಬಳಗದ ಸದಸ್ಯರು ಪಂಚಾಕ್ಷರ ಗವಾಯಿಗಳವರ ಕುರಿತಾದ ಗೀತೆಗಳನ್ನು ಸುಮಧುರವಾಗಿ ಹಾಡಿ ಮೆರಗು ತಂದರು.

ಬಳಗದ ಅಧ್ಯಕ್ಷರಾದ ಎಂ ತೋಟಪ್ಪ ಉತ್ತಂಗಿ ,ದಾಸೋಹಿಗಳಾದ ಪ್ರೇಮಾ ಚಂದ್ರಪ್ಪ, ಉಪಸಮಿತಿ ಅಧ್ಯಕ್ಷರಾದ ಸುಮಾ ರಾಜಶೇಖರ್, ನಾಗಲಾಂಭಿಕಾ ಮಲ್ಲಿಕಾರ್ಜುನ್, ಸುಮಾಪ್ರಕಾಶ್ ಉಪಸ್ಥಿತರಿದ್ದರು. ಬಳಗದ ಗೌರವಾಧ್ಯಕ್ಷರಾದ ಎಸ್. ವಿ.ಗುರುಮೂರ್ತಿ, ಉಪಾಧ್ಯಕ್ಷರಾದ ಎಲ್.ಎಸ್. ಚಿನ್ಮಯಾನಂದ್, ಕಾರ್ಯದರ್ಶಿ ಬಸವರಾಜಕಟ್ಟಿ, ಪದಾಧಿಕಾರಿಗಳಾದ ಉಮೇಶ್ ಪತ್ತಾರ, ಎ ಎಂ.ಆರ್. ಮಲ್ಲಿಕಾರ್ಜುನ, ನಿರ್ಮಲ, ಮಹಾಂತಮ್ಮ,ಕೆ.ಸಿ.ರುದ್ರೇಶ್, ಕೋಕಿಲಾ ಎಂ.ಜೆ.ಮನು ಸೇರಿದಂತೆ ಕಲಾವಿದರು, ಕಲಾಸಕ್ತರು ಹಾಗೂ ಮಕ್ಕಳು ಭಾಗವಹಿಸಿದ್ದರು.

ಡಾ.ಚಾಂದಿನಿ ಖಲಿದ್ ಸ್ವಾಗತಿಸಿದರು.ರೀನಾವೀರಭದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ಗೀತಾರುದ್ರೇಶ್ ಕಾರ್ಯಕ್ರಮ ನಿರ್ವಹಿಸಿದರು. ವಾಗ್ಮಿಗಳಾದ ಎನ್.ಟಿ.ಲಿಂಗರಾಜು ಶರಣು ಸಮರ್ಪಣೆ ಮಾಡಿದರು.