ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ ಶ್ರೀಗಳ ದಿವ್ಯಾತ್ಮಗಳು ಅಮರ

| Published : Jun 24 2024, 01:33 AM IST

ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿ ಶ್ರೀಗಳ ದಿವ್ಯಾತ್ಮಗಳು ಅಮರ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರಿ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ, ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನ ನಡೆಯಿತು.

ಗದಗ: ಲಿಂ. ಪಂಚಾಕ್ಷರ ಮತ್ತು ಲಿಂ. ಪುಟ್ಟರಾಜ ಕವಿ ಗವಾಯಿಗಳವರ ದಿವ್ಯಾತ್ಮಗಳು ಇಂದಿಗೂ ಅಮರವಾಗಿವೆ. ವೀರೇಶ್ವರ ಪುಣ್ಯಾಶ್ರಮಕ್ಕೂ ಹಾಗೂ ಕಾಶಿ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಕಾಶಿಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.

ಅವರು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಶಿವಯೋಗಿ ಲಿಂ. ಪಂಚಾಕ್ಷರಿ ಗವಾಯಿಗಳವರ 80ನೇ ಪುಣ್ಯಸ್ಮರಣೋತ್ಸವ ಹಾಗೂ ಪದ್ಮಭೂಷಣ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳವರ 14ನೇ ಪುಣ್ಯಸ್ಮರಣೋತ್ಸವ ಉಭಯ ಗುರುಗಳ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ಜರುಗಿದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಂಧರ ಬಾಳಿಗೆ ಜ್ಞಾನದೀಪವನ್ನು ವೀರೇಶ್ವರ ಪುಣ್ಯಾಶ್ರಮ ನಿರಂತರವಾಗಿ ನೀಡುತ್ತ ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸೂಡಿ ಜುಕ್ತಿಹಿರೇಮಠದ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದಂಥ ಗುರುಕುಲ ಜಗತ್ತಿನಲ್ಲಿಯೇ ಎಲ್ಲೂ ಇಲ್ಲ. ಇದು ಸಂಗೀತ ಲೋಕದ ಪ್ರಯೋಗಾಲಯವಾಗಿದೆ. ಇದು ಸುಖದ ಆಶ್ರಮವಲ್ಲ, ಇದನ್ನು ಕಟ್ಟಿ ಬೆಳೆಸಲು ಗುರುಗಳೊಂದಿಗೆ ಹೋರಾಟ ಮಾಡಿದ ಸಾಕಷ್ಟು ಹಿರಿಯ ಜೀವಿಗಳು ನಮ್ಮ ಕಣ್ಮುಂದೆ ಇದ್ದಾರೆ ಎಂದರು.

ಅಡ್ನೂರ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ಬೈಲಹೊಂಗಲದ ಡಾ. ಮಹಾಂತಯ್ಯ ಸ್ವಾಮಿಗಳು ಆರಾದ್ರಿಮಠ, ಗದಗಿನ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಸಮ್ಮುಖ ವಹಿಸಿದ್ದರು. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಸಲ್ಲಿಸಿದರು. ಕುಮಾರೇಶ್ವರ ಕೃಪಾಪೋಷಿತ ಡಾ. ಪುಟ್ಟರಾಜ ಕವಿ ಗವಾಯಿಗಳವರ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ಜರುಗಿತು. ಪಂಚಾಕ್ಷರಿ ಗವಾಯಿಗಳವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವೀರೇಶ ಕೂಗು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ಸೋಮನಾಳದ ಮಹದೇವಯ್ಯ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು.

ಪಂ. ರಾಜಗುರು ಗುರುಸ್ವಾಮಿ ಕಲಕೇರಿ, ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್‌ನ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಮ್ಸ್‌ನ ಶಸ್ತ್ರ ಚಿಕಿತ್ಸಕ ಡಾ. ಬಿ.ಎಸ್. ಕರೇಗೌಡ್ರ, ಡಾ. ವಿ.ಎಂ. ಮಲಗೌಡ್ರ, ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್‌ನ ಸದಸ್ಯ ಪಿ.ಸಿ. ಹಿರೇಮಠ, ಎಂ.ಆರ್. ಹಿರೇಮಠ, ಲಿಂಗರಾಜ ಗುಡಿಮನಿ, ಅನಿಲ್ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ಮಹೇಶ ಶಾಬಾದಿಮಠ, ವಿಜಯಕುಮಾರ ಹಿರೇಮಠ, ವಿ.ಎಸ್. ಮಾಳೆಕೊಪ್ಪಮಠ, ಅಂಬರೀಶ ಹಿರೇಮಠ, ಜಿ.ಬಿ. ನೀಲರೆಡ್ಡಿ, ಎಂ.ಎಂ. ಕುಕನೂರ ಉಪಸ್ಥಿತರಿದ್ದರು.

ಗ್ರಂಥ ಬಿಡುಗಡೆ: ಡಾ. ಪುಟ್ಟರಾಜ ಕವಿ ಗವಾಯಿಗಳವರು ರಚಿಸಿದ ಶ್ರೀ ಗುರುವಚನ ಪ್ರಭ ಗ್ರಂಥ, ಪದ್ಮಭೂಷಣ ಡಾ. ಪುಟ್ಟರಾಜ ಕವಿ ಗವಾಯಿಗಳವರ ಕವಿಕೃತ ಮಹಾದೇವಿ ಪುರಾಣಂ ಗ್ರಂಥ ಲೋಕಾರ್ಪಣೆ ಹಾಗೂ ಡಾ. ಕಲ್ಲಯ್ಯಜ್ಜನವರು ಸಾಹಿತ್ಯ ರಚಿಸಿದ ಶಿವಯೋಗಿ ಸಂತ ಪುಟ್ಟಯ್ಯಜ್ಜ ಧ್ವನಿಸುರಳಿಯನ್ನು ಬಿಡುಗಡೆಗೊಳಿಸಲಾಯಿತು.

ಶ್ರೀಗುರು ರಕ್ಷೆ: ಬೆಳಗ್ಗೆ 11ಕ್ಕೆ ಶ್ರೀಗಳು ಶ್ರೀಗುರು ರಕ್ಷೆ ನೀಡಿದರು. ಅಡ್ನೂರ ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಯಯ್ಯಜ್ಜನವರು ಅಧ್ಯಕ್ಷತೆ ವಹಿಸಿದ್ದರು. ಅರಳಿಕಟ್ಟಿಯ ಗಂಗಾಧರಯ್ಯ, ಧಾರವಾಡದ ಈರಪ್ಪ ಅಕ್ಕಿ, ಹುಬ್ಬಳ್ಳಿಯ ಚಂದ್ರಶೇಖರ ಶಿವಶಿಂಪಗೇರ, ಅಭಿಯಂತ ರುದ್ರಗೌಡ ರಬ್ಬನಗೌಡ್ರ, ಗೊಂಡಬಾಳದ ಶರಣಗೌಡ್ರ ಬಾವಿಕಟ್ಟಿ, ದೇವಪ್ಪ ಗುಗ್ಗರಿ, ಕೆಂಪಣ್ಣ ಹೂಗಾರ, ಸಿದ್ದಲಿಂಗಪ್ಪ ಶಿವಶಿಂಪಿ ಅವರಿಗೆ ಗುರುರಕ್ಷೆ ನೀಡಲಾಯಿತು.

ನಾಟಕ ಪ್ರದರ್ಶನ: ರಾತ್ರಿ 10.30ಕ್ಕೆ ಗಾನ ಶಿವಯೋಗಿ, ಕವಿಚಕ್ರವರ್ತಿ ಪದ್ಮಭೂಷಣ ಡಾ. ಪುಟ್ಟರಾಜ ಕವಿ ಗವಾಯಿಗಳವರ ವಿರಚಿತ ಶ್ರೀ ಕೃಷ್ಣಗಾರುಡಿ ಪೌರಾಣಿಕ ಅರ್ಥಾರ್ಥ ಭೀಮಾರ್ಜುನರ ಗರ್ವಭಂಗ ಎಂಬ ನಾಟಕವನ್ನು ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಿವಸಂಗಮ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎಂ. ಪಲ್ಲೇದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಬಿಐನ ನಿವೃತ್ತ ಅಧಿಕಾರಿ ಪರಶುರಾಮ ಕಟ್ಟಿಮನಿ ನಾಟಕ ಉದ್ಘಾಟಿಸಿದರು. ಡಿಎಸ್ಪಿ ಜೆ. ಎಚ್. ಇನಾಮದಾರ, ಜೋಹರಾ ಕೌತಾಳ, ನಾಡಗೌಡ್ರು ಅಪ್ಪಸಾಬ ಗೌಡ್ರು ಉಪಸ್ಥಿತರಿದ್ದರು.