ಪಂಚಾಕ್ಷರಿ ಗವಾಯಿಗಳು ಅಂಧ, ಅನಾಥರ ಮಹಾನ್ ಚೇತನ

| Published : Feb 05 2025, 12:33 AM IST

ಸಾರಾಂಶ

ಜಾತಿ, ಮತ ಬೇಧವಿಲ್ಲದೇ ಸಕಲರಿಗೆ ಸಂಗೀತ ವಿದ್ಯೆ ಧಾರೆ ಎರೆದ ಪಂ.ಪಂಚಾಕ್ಷರಿ ಗವಾಯಿಗಳು ಅಂಧ, ಅನಾಥರ ಬಾಳು ಬೆಳಗಿದ ಮಹಾನ್ ಚೇತನ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಜಾತಿ, ಮತ ಬೇಧವಿಲ್ಲದೇ ಸಕಲರಿಗೆ ಸಂಗೀತ ವಿದ್ಯೆ ಧಾರೆ ಎರೆದ ಪಂ.ಪಂಚಾಕ್ಷರಿ ಗವಾಯಿಗಳು ಅಂಧ, ಅನಾಥರ ಬಾಳು ಬೆಳಗಿದ ಮಹಾನ್ ಚೇತನ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದ ಪಂ.ಪಂಚಾಕ್ಷರಿ ಗವಾಯಿಗಳ ಜಯಂತ್ಯುತ್ಸವ, ಸಂಗೀತೋತ್ಸವ, ಹಕ್ಕಲಬಸವೇಶ್ವರ ಹಾಗೂ ನೀಲಾಂಬಿಕಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಾಡಿನಲ್ಲಿ ಇಂದು ಸಂಗೀತ ನಿನಾದಿಸುತ್ತಿದ್ದರೆ, ಸಂಗೀತ ಪರಂಪರೆ ಮುಂದುವರೆದಿದ್ದರೆ ಅದಕ್ಕೆ ಕಾರಣ ಪಂಚಾಕ್ಷರಿ ಗವಾಯಿಗಳು. ಪಂಚಾಕ್ಷರಿ ಗವಾಯಿಗಳಲ್ಲಿನ ಸಂಗೀತ ಸಾಮರ್ಥ್ಯ ಗುರುತಿಸಿ ಅವರನ್ನು ಶಿವಯೋಗ ಮಂದಿರಕ್ಕೆ ಕರೆದೊಯ್ದು ಸಂಗೀತಾಭ್ಯಾಸ ಮಾಡಿಸಿದ್ದು ಹಾನಗಲ್ ಲಿಂ.ಕುಮಾರ ಶಿವಯೋಗಿಗಳು. ಸಂಗೀತ ಮಾತ್ರವಲ್ಲದ ಸಾಹಿತ್ಯದಲ್ಲಿಯೂ ಅಪಾರ ಪಾಂಡಿತ್ಯವನ್ನು ಗವಾಯಿಗಳು ಹೊಂದಿದ್ದರು. ಅವರ ಪುಣ್ಯ ಪರಂಪರೆಯನ್ನು ಪಂ.ಪುಟ್ಟರಾಜ ಗವಾಯಿಗಳು ಮುಂದುವರೆಸಿಕೊಂಡು ಹೋದರು. ಇಬ್ಬರೂ ಗವಾಯಿಗಳು ಹಾನಗಲ್ ಮಣ್ಣಿನ ನಕ್ಷತ್ರಗಳು ಎಂದು ಸಂತಸ ವ್ಯಕ್ತಪಡಿಸಿದರು. ಸಾನ್ನಿಧ್ಯ ವಹಿಸಿದ್ದ ಹೋತನಹಳ್ಳಿಯ ಸಿಂದಗಿಮಠದ ಶಂಭುಲಿಂಗ ಸ್ವಾಮೀಜಿ ಮಾತನಾಡಿ, ಗವಾಯಿಗಳು ಅಪ್ಪಟ ಕನ್ನಡ ಪ್ರೇಮಿಗಳಾಗಿದ್ದರು. ಪ್ರತಿಷ್ಠಿತ ಕಂಪನಿಯೊಂದು ಖ್ಯಾತ ಕಲಾವಿದರ ಗಾನಮುದ್ರಿಕೆ ಹೊರತರಲು ಅನೇಕ ಕಲಾವಿದರನ್ನು ಮುಂಬಯಿಗೆ ಕರೆಯಿಸಿತ್ತು. ಆ ಸಂದರ್ಭದಲ್ಲಿ ಪಂಚಾಕ್ಷರಿ ಗವಾಯಿಗಳೂ ತೆರಳಿದ್ದರು. ಆದರೆ ಕನ್ನಡದಲ್ಲಿಯೇ ಗಾಯನ ಮಾಡುವುದಾಗಿ ಹಠ ಹಿಡಿದಾಗ, ಕಂಪನಿಯೂ ಮಣಿಯಿತು ಎಂದು ಹೇಳಿದರು. ಗವಾಯಿಗಳು ಕೇವಲ ಖಾದಿಯನ್ನಷ್ಟೇ ಧರಿಸುತ್ತಿದ್ದರು. ಆಯುರ್ವೇದ ಹೊರತಾಗಿ ಇಂಗ್ಲಿಷ್ ಮಾದರಿ ಚಿಕಿತ್ಸೆ ಪಡೆಯುತ್ತಿರಲಿಲ್ಲ ಎಂದರು. ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಸದ್ಭಕ್ತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.