ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಕಲ್ಪಿಸಿದ್ದ ಸಂಕಲ್ಪವನ್ನು ಇಲ್ಲಿಯವರೆಗೂ ಈಡೆರಿಸುವಲ್ಲಿ, ಟ್ರಸ್ಟ್ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಗಂಭೀರವಾಗಿ ಆರೋಪಿಸಿದ್ದಾರೆ.
- ಕಪ್ಪುಹಣ ಬಿಳಿಯಾಗಿಸಲು ಪೀಠ, ಟ್ರಸ್ಟ್ ಬಳಕೆ: ಆರೋಪ: ಎಚ್.ಎಸ್.ಶಿವಶಂಕರ್
- - -ಕನ್ನಡಪ್ರಭ ವಾರ್ತೆ ಹರಿಹರ
ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಸಂಕಲ್ಪಿಸಿದ್ದ ಸಂಕಲ್ಪವನ್ನು ಇಲ್ಲಿಯವರೆಗೂ ಈಡೆರಿಸುವಲ್ಲಿ, ಟ್ರಸ್ಟ್ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಗಂಭೀರವಾಗಿ ಆರೋಪಿಸಿದರು.ನಗರದ ಹೊರಭಾಗದ ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಅಯೋಧ್ಯ ಹೋಟೆಲ್ ಸಭಾ ಭವನದಲ್ಲಿ, ವೀರಶೈವ ಲಿಂಗಾಯತ ಪಂಚಮಸಾಲಿ ಶ್ರೀಪೀಠ, ಲೆಕ್ಕಕೊಡಿ ಚಳವಳಿ ಹೋರಾಟ ಸಮಿತಿ ಹಾಗೂ ರಾಜ್ಯ ಪಂಚಮಸಾಲಿ ಸಮಾಜ ಬಾಂಧವರ ಸಭೆಯಲ್ಲಿ ಅವರು ಮಾತನಾಡಿದರು.
2008 ರಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಪಂಚಮಸಾಲಿ ಪೀಠದ ಹೆಸರಿನಲ್ಲಿ ನೋಂದಣಿ ಹೊಂದಿರುವ ಟ್ರಸ್ಟ್‌ನ ಟ್ರಸ್ಟಿಗಳು ಸರ್ಕಾರದ ಕಣ್ಣಿಗೆ ಮಣ್ಣೆರಚಿ ತಮ್ಮ ವ್ಯಾಪಾರದ ಕಪ್ಪುಹಣ ಬಿಳಿಯಾಗಿಸಿಕೊಳ್ಳಲು ಪೀಠ ಮತ್ತು ಟ್ರಸ್ಟ್ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಕಟ್ಟಡಗಳನ್ನು ಕಟ್ಟುವುದರಿಂದ ಪಂಚಮಸಾಲಿ ಸಮಾಜ ಅಭಿವೃದ್ಧಿ ಹೊಂದುವುದಿಲ್ಲ. ಸಂಘಟಿತಗೊಂಡ ಸಮಾಜದಿಂದ ಮೊದಲು ಪೀಠ, ನಂತರ ಮಠ ಸ್ಥಾಪನೆಗೊಂಡಿತು. ಆನಂತರ ಸಮಾಜ ಬಾಂಧವರಿಂದ, ದಾನಿಗಳಿಂದ, ಸರ್ಕಾರದಿಂದ ಬರುವ ಹಣದಿಂದ ಸಮಾಜ ಕಟ್ಟುವ ಬದಲು, ಕಟ್ಟಡಗಳನ್ನು ಕಟ್ಟುವುದಕ್ಕಾಗಿ ಹುಟ್ಟಿಕೊಂಡಿರುವ ಟ್ರಸ್ಟ್ ಪದಾಧಿಕಾರಿಗಳು 18 ವರ್ಷಗಳಲ್ಲಿ ಸಮಾಜದ ನೌಕರರಿಂದ, ರೈತರಿಂದ, ಕಟ್ಟಕಡೆಯ ವ್ಯಕ್ತಿಗಳಿಂದ, ಉದ್ಯಮಿಗಳಿಂದ, ದಾನಿಗಳಿಂದ, ರಾಜಕೀಯ ಮುಖಂಡರಿಂದ ಹಾಗೂ ಸರ್ಕಾರದಿಂದ ಬಂದ ಒಟ್ಟು ಅಂದಾಜು ₹70 ಕೋಟಿಗೂ ಅಧಿಕ ಹಣವನ್ನು ಪೀಠದ ಟ್ರಸ್ಟಿಗಳು ಬಳಸಿದ್ದು ಲೆಕ್ಕ ನೀಡುವಲ್ಲಿ, ಭಾರಿ ಅವ್ಯವಹಾರ ನಡೆಸಿದ್ದಾರೆಂದರು.
ಬಾವಿ ಬೆಟ್ಟಪ್ಪನವರೇ ಬಹಿರಂಗಪಡಿಸಿದ್ದರ ಫಲವಾಗಿ ಲೆಕ್ಕಕೊಡಿ ಚಳವಳಿ ಹುಟ್ಟಿಕೊಂಡಿದೆ. ಅದರಂತೆಯೇ ಲೆಕ್ಕ ಕೊಡಿ ಚಳವಳಿಯ ಕಾವು ಹೆಚ್ಚಾದ ಕಾರಣ ಏ.27ರಂದು ನೀಡಿದ ₹27.5 ಕೋಟಿ ಲೆಕ್ಕ ಶುದ್ಧ ಸುಳ್ಳು ಲೆಕ್ಕವಾಗಿದೆ. ಕಳೆದ 18 ವರ್ಷ ಪೀಠದ ಹತ್ತಿರಕ್ಕೆ ಸುಳಿಯದವರು ಈಗ ಏಕೆ ಇತ್ತ ಕಡೆ ಬಂದಿದ್ದಾರೆ ಎಂದು ನನ್ನ ಬಗ್ಗೆ ಟ್ರಸ್ಟಿಗಳು ಮಾತನಾಡುತ್ತಿದ್ದಾರೆ. ಟ್ರಸ್ಟಿಗಳನ್ನು ನಂಬಿ ಹಣ ನೀಡಿ ಮೋಸಕ್ಕೆ ಒಳಗಾದ ಸಮಾಜದ ಮುಖಂಡರು ಜನತೆ ಹಾಗೂ ಇನ್ನಿತರರ ಒತ್ತಾಯದ ಮೇರೆಗೆ, ಸಮಾಜದ ಸ್ವಾಸ್ತ್ಯವನ್ನು ಕಾಪಾಡುವುದಕ್ಕಾಗಿ, ಪೀಠದಲ್ಲಿ ನಡೆಯುತ್ತಿರುವ ಎಲ್ಲ ಅವ್ಯವಹಾರಗಳನ್ನು ಬಯಲಿಗೆ ಎಳೆಯಲು ಬಂದಿದ್ದೇನೆ ಎಂದರು.ಪಂಚಮಸಾಲಿ ಪೀಠದ ಟ್ರಸ್ಟಿಗಳಲ್ಲಿ ಸುಳ್ಳು ಲೆಕ್ಕದ ಖಳನಾಯಕ ಆಗಿರುವ ಬಿ.ಸಿ. ಉಮಾಪತಿಯವರು ನೀಡಿದ ₹27.5 ಕೋಟಿ ಲೆಕ್ಕದಲ್ಲಿ ಭಾರಿ ಅವ್ಯವಹಾರ ಬಯಲಾಗಿದೆ. 175 ಕೆ.ಜಿ ಬೆಳ್ಳಿ ಎಲ್ಲಿದೆ? ಟ್ರಸ್ಟ್ ಹೆಸರಿನಲ್ಲಿ ಎಷ್ಟು ಅಕೌಂಟ್‌ಗಳಿವೆ? ತಾಕತ್ತಿದ್ದರೆ ವಚನಾನಂದ ಶ್ರೀಗಳನ್ನು ಪೀಠದಿಂದ ಹೊರಗೆ ಹಾಕಲಿ ನೋಡೋಣ ಎಂದರು.
ಮನಗೂಳಿ ಮಠದ ಶ್ರೀಗಳಿಗೆ ಬುದ್ಧಿ ಇಲ್ಲ. ಹರಿಹರ ಪೀಠಕ್ಕೆ ಬರುವ ಯೋಚನೆಯಿದ್ದರೆ ಬಿಟ್ಟುಬಿಡಿ. ನಿಮ್ಮ ಹಿನ್ನೆಲೆ ನನಗೆ ಗೊತ್ತಿದೆ. ಬಿ.ಸಿ. ಉಮಾಪತಿ ಅವರಿಗೆ ಸತ್ಯದ ಲೆಕ್ಕವನ್ನು ನೀಡಲು ಮುಂದಾಗಿ. ನೀವು ಸತ್ಯದ ಲೆಕ್ಕವನ್ನು ನೀಡಿದ್ದೀರಿ ಎಂದಾದರೆ ಧರ್ಮಸ್ಥಳಕ್ಕಾಗಲಿ, ಕೊಟ್ಟೂರೇಶ್ವರನ ಸನ್ನಿಧಿಗಾಗಲಿ ಬಂದು ಆಣೆ ಪ್ರಮಾಣ ಮಾಡಿ. ಆಗ ಲೆಕ್ಕ ಕೊಡಿ ಚಳವಳಿ ಕೈ ಬಿಡುತ್ತೇವೆ ಎಂದು ಎಚ್.ಎಸ್ ಶಿವಶಂಕರ್ ಹೇಳಿದರು.ಸಭೆ ಅಧ್ಯಕ್ಷತೆ ವಹಿಸಿದ್ದ ಲೆಕ್ಕ ಕೊಡಿ ಚಳವಳಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ. ಪರಮೇಶ್ವರಗೌಡ್ರ ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಲು ಪಂಚಮಸಾಲಿ ಸಮಾಜವು ಸಂಘಟಿತಗೊಂಡಿದೆ. ಸಂಘಟಿತ ಸಮಾಜದ ಹೆಸರಿನಲ್ಲಿ ಸ್ಥಾಪನೆಗೊಂಡಿರುವ ಪೀಠದಲ್ಲಿ ನುಸುಳಿರುವ ವ್ಯಾಪಾರ ಸಂಸ್ಕೃತಿಯ ನಮ್ಮವರೇ ತಮ್ಮ ಸ್ವಾರ್ಥ ಸಾಧನೆ ಸ್ವಹಿತ ಚಿಂತನೆಯ ದೃಷ್ಠಿಯಿಂದ, ನಮ್ಮ ಸಮಾಜದವರೇ ನಮ್ಮ ನಮ್ಮೊಳಗೆ ವಿಷಬೀಜ ಬಿತ್ತಿ ಸಮಾಜ, ಸಂಘಟನೆಯನ್ನು ಹಾಳು ಮಾಡುತ್ತಿದ್ದರೆ ಎಂದು ದೂರಿದರು.
ಸಭೆಯಲ್ಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪಂಚಮಸಾಲಿ ಸಮಾಜದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ಡಾ. ಬಸವರಾಜ ವೀರಾಪುರ, ಎಂ.ಬಿ. ಬಸವರಾಜ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ ಎಂ.ಸಿ., ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ್, ಟ್ರಸ್ಟಿ ಹೊನ್ನಾಳಿ ಬಾಬಣ್ಣ, ಸಿದ್ದು ಚಿಕ್ಕಬಿದರಿ, ವೀರೇಶ ಮೂಟಗಿ, ಶಿವು ಗುಡ್ಡಾಪುರ ಸೇರಿದಂತೆ ರಾಜ್ಯದ 31 ಜಿಲ್ಲೆಗಳಿಂದ ಬಂದಿದ್ದ ಅನೇಕರು ಮಾತನಾಡಿದರು.- - - -05ಎಚ್.ಆರ್.ಆರ್ 02:
ಪಂಚಮಸಾಲಿ ಸಮಾಜದ ಸಭೆಯಲ್ಲಿ ಸಮಾಜದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್ ಗೌಡ ಚನ್ನಬಸಪ್ಪಗೌಡ ಪಾಟೀಲ್ ಅವರನ್ನು ಸನ್ಮಾನಿಸಲಸಯಿತು.